ನಾಡಹಬ್ಬದ ಸಂಭ್ರಮ ಶುರುವಾಯ್ತು!
– ಮೈಸೂರು ದಸರಾಗೆ ಹಂಸಲೇಖ ಚಾಲನೆ
– ನಾಡಿನೆಲ್ಲೆಡೆ ಅದ್ದೂರಿ ದಸರಾ ಮಹೋತ್ಸವ
– ಹಳ್ಳಿ ಹಳ್ಳಿ,ಮನೆ ಮನೆಯಲ್ಲೂ ಸಂಭ್ರಮ
– ನಾಡಿನ ಖ್ಯಾತ ದೇವಾಲಯಕ್ಕೆ ಜನವೋ ಜನ
NAMMUR EXPRESS NEWS
ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಅಲ್ಲದೆ ನಾಡಿನ ಎಲ್ಲಾ ಕಡೆ ಸಂಭ್ರಮದ ದಸರಾ ನಡೆಯುತ್ತಿದೆ. ನವರಾತ್ರಿಯ ಮೊದಲ ದಿನ ಶರನ್ನವರಾತ್ರಿಗೆ ಚಾಲನೆ ಸಿಕ್ಕಿದೆ. ಮೈಸೂರಲ್ಲಿ ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದ್ದಾರೆ.
ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಗೆ ಚಾಲನೆ ನೀಡಿದರು.
ಈ ವೇಳೆ ನಾಡಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಸಚಿವರಾದ ಕೆ. ವೆಂಕಟೇಶ್ ,ಕೆ. ಜೆ. ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಚಾಮುಂಡಿ ಪೂಜೆ, ಕಂಕಣಧಾರಣೆ ಸೇರಿ ಹಲವು ವಿಧಿವಿಧಾನಗಳು ನಡೆದವು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನನ್ನ ನಮನ. ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು.
ಮೈಸೂರು ಸೇರಿ ಎಲ್ಲೆಡೆ ಬಿಗಿ ಬಂದೋಬಸ್ತ್
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಅ.24ರವರೆಗೂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಡಿಐಜಿ, 11 ಎಸ್ಪಿ, 410 ಪೊಲೀಸ್ ಅಧಿಕಾರಿಗಳು, 3778 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 4200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡ ಪಡೆ ಸಹ ನಿಯೋಜಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ದಸರಾ ರಂಗು!
ರಾಜ್ಯದ 31 ಜಿಲ್ಲೆಯ ಎಲ್ಲಾ ತಾಲೂಕು, ಹಳ್ಳಿಗಳಲ್ಲೂ ದಸರಾ ರಂಗು ಮನೆ ಮಾಡಿದೆ. ಹಳ್ಳಿಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ದೇವಿಯ, ಗೊಂಬೆಗಳ ಅಲಂಕಾರ ಮಾಡಲಾಗುತ್ತಿದೆ. ನವರಾತ್ರಿಯಿಂದ ಶುಭ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಅದ್ದೂರಿ ದಸರಾಕ್ಕೆ ಸಿದ್ಧತೆ ನಡೆದಿದೆ.