ಕರಾವಳಿಯಲ್ಲಿ ಹೆಚ್ಚಿದ ಹಿಟ್ ಅಂಡ್ ರನ್!
– ಮಂಗಳೂರಲ್ಲಿ ಯುವತಿ ಸಾವು: ನಾಲ್ವರಿಗೆ ಗಾಯ
ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ
ಮಣಿಪಾಲ: ಬೈಕ್ ಡಿವೈಡರ್’ಗೆ ಡಿಕ್ಕಿ : ಓರ್ವ ಸಾವು
ಕುಂದಾಪುರ: ಖಾಸಗಿ ಬಸ್ ಪಲ್ಟಿ: 18 ಮಂದಿಗೆ ಗಾಯ
ಮಂಗಳೂರು: ದೇವರ ಆಭರಣ ಕಳವು ಮಾಡಿದ ಮಾಜಿ ಅಧ್ಯಕ್ಷ , ಕದ್ದ ಚಿನ್ನಾಭರಣಗಳ ಜೊತೆ ಶರಣು..!
NAMMUR EXPRESS NEWS
ಮಂಗಳೂರು: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಣ್ಣಗುಡ್ಡೆ ಬಳಿ ಬುಧವಾರ ನಡೆದಿದೆ. ಮೃತ ಯುವತಿ ಸುರತ್ಕಲ್ನ ಬಾಳ ನಿವಾಸಿ ಗಂಗಾಧರ ಎಂಬವರ ಪುತ್ರಿ ರೂಪಶ್ರೀ (22) ಎಂದು ತಿಳಿದು ಬಂದಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡ ಸ್ವಾತಿ (26), ಹಿತ್ನವಿ (16) ಕಾರ್ತಿಕಾ( 16) ಮತ್ತು ಯಥಿಕಾ(12) ಎಂಬವರರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ಬಳಿ ರೂಪಶ್ರೀ ತನ್ನ ಸಂಬಂಧಿಕರ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದುಬಂದಿದೆ.ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಘಾತಕ್ಕೆ ಕಾರಣವಾದ ಹೋಂಡಾ ಇಯಾನ್ ಕಾರು ಹಾಗೂ ಚಾಲಕ ಕಮಲೇಶ್ ಬಲದೇವ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ
ಬಂಟ್ವಾಳ : ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೋಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಸೊತ್ತುಗಳನ್ನು ಬಿಟ್ಟು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಸಿ.ಇ.ಎನ್ ಅಪರಾಧ ಪೋಲೀಸ್ ಠಾಣಾ ಪೋಲೀಸ್ ಉಪನಿರೀಕ್ಷಕ ಮಂಜುನಾಥ ಟಿ.ಅವರು ಕಚೇರಿ ಕಾರ್ಯದ ನಿಮಿತ್ತ ಮಂಚ ರಸ್ತೆಯಾಗಿ ಹೋಗುತ್ತಿದ್ದ ವೇಳೆ ಮಂಚಿ – ಮುಡಿಪು ರಸ್ತೆಯ ಕಂಡತಟ್ಟು ಗುಡ್ಡ ತಲುಪಿದಾಗ ಅಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವುದು ಕಂಡು ಬಂದಿದೆ.
ಬೈಕ್ ಡಿವೈಡರ್’ಗೆ ಡಿಕ್ಕಿ: ಓರ್ವನ ಸಾವು
ಉಡುಪಿ: ಬೈಕೊಂದು ಡಿವೈಡರ್ ಗೆ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮರಣ ಹೊಂದಿದ ಘಟನೆ ಮಣಿಪಾಲದ ಪರ್ಕಳ ಹೆದ್ದಾರಿಯ ಬಿ.ಎಂ.ಸ್ಕೂಲ್ ಬಳಿ ನಡೆದಿದೆ ಅಕ್ಷಯ ಭಟ್(26) ಎಂದು ಗುರುತಿಸಲಾಗಿದೆ. ಅಕ್ಷಯ್ ಭಟ್ ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆಯ ಅಡುಗೆ ಕೆಲಸ ನಿರ್ವಹಿಸಲು ಮುಂಜಾನೆ ಮನೆಯಿಂದ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಅಕ್ಷಯ ಭಟ್ ತಲೆಗೆ ತೀವ್ರ ತರಹದ ಗಾಯಗಳಾಗಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲದ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಪಡೆಯುವಾಗಲೇ ಅಕ್ಷಯ್ ಕೊನೆಯುಸಿರೆಳೆದಿದ್ದಾರೆ
ಕುಂದಾಪುರದಲ್ಲಿ ಬಸ್ ಅಪಘಾತ: 18 ಮಂದಿಗೆ ಗಾಯ
ಕುಂದಾಪುರ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು 18 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಅರಾಟೆ ಮುಳ್ಳಿ ಕಟ್ಟೆ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಕುಂದಾಪುರದಿಂದ ಬೈಂದೂರು ಕಡೆ ಹೊರಟ ಲೋಕಲ್ ಬಸ್ಸು ಅರಾಟೆ ಸೇತುವೆ ದಾಟಿದ ಬಳಿಕ ಚಾಲಕನ ಅತಿವೇಗ ಹಾಗೂ ನಿರ್ಲಕ್ಷದಿಂದಾಗಿ ನಿಯಂತ್ರಣ ತಪ್ಪಿದ್ದು, ಡಿವೈಡರ್ ಏರಿ ಪಕ್ಕದ ರಸ್ತೆಗೆ ಪಲ್ಟಿಯಾಗಿದೆ. ಇದೇ ವೇಳೆ ಎದುರಿಗೆ ಬರುತ್ತಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಅಘಘಾತದ ರಭಸಕ್ಕೆ ಬಸ್ಸಿನಲ್ಲಿದ್ದ 18ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ ನಡೆದ ತಕ್ಷಣ ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.
ದೇವರ ಆಭರಣ ಕದ್ದ ಮಾಜಿ ಅಧ್ಯಕ್ಷ ಶರಣು!
ಮಂಗಳೂರು: ದೇವಸ್ಥಾನದ ಅಭರಣ ಕಳವು ಮಾಡಿದ್ದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಇದು ಗೊತ್ತಾಗಿ ದೂರು ದಾಖಲಾದಾಗ ಕದ್ದ `ಅಭರಣ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಉಪ್ಪಿನಂಗಡಿ ಸಮೀಪ ಸಂಭವಿಸಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆಯ ಕಳೆಂಜ-ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ವೇಳೆ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವುದು ಕೆಲದಿನಗಳ ಹಿಂದೆ ಬಯಲಾಗಿತ್ತು. ಕೂಡಲೇ ಈ ಬಗ್ಗೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಬೆನ್ನಿಗೆಯೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.
ದೇವಾಲಯದ ಬ್ರಹ್ಮಕಲಶಾಭಿಷೇಕದ ವೇಳೆ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋಮಾಲೆ ಸರವನ್ನು ದೇವರಿಗೆ ಸಮರ್ಪಿಸಿದ್ದರು. ಇದರೊಂದಿಗೆ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿತ್ತು.
ಕಳೆದ ಭಾನುವಾರ ಆಡಳಿತಾಧಿಕಾರಿಯ ಸಮ್ಮುಖದಲ್ಲಿ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆಯೇ, ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿರಿಸಿ ಹಣ ಪಡೆದಿದ್ದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಿಂದ ಬಿಡಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮ ಕೈಗೊಂಡಿದ್ದಾರೆ. ಆದರೆ ಮತ್ತೊಂದು ಚಿನ್ನದ ಸರ ನಾಪತ್ತೆಯಾಗಿದ್ದು, ಇದರ ತನಿಖೆ ಮುಂದುವರಿದಿದೆ.