ಪ್ರೇಮ ವೈಫಲ್ಯಕ್ಕೆ ಯುವಕನ ಜೀವ ಹೋಯ್ತು!
– ಮನನೊಂದ ಯುವಕ ಕಾಡಿನಲ್ಲಿ ಆತ್ಮಹತ್ಯೆ: ಡೆತ್ ನೋಟ್ ಪತ್ತೆ
ಮಂಗಳೂರು: ಬಾಯೊಳಗೆ ದುಬೈನಿಂದ ಕದ್ದು ಸಾಗಿಸುತ್ತಿದ್ದ 11 ಲಕ್ಷ ಮೌಲ್ಯದ ಚಿನ್ನ ವಶ
ಸುಳ್ಯ: ಕಾಡಾನೆ ದಾಳಿ, ಕೃಷಿ ನಾಶ: ಜೀವ ಭಯ!
NAMMUR EXPRESS NEWS
ಬಂಟ್ವಾಳ: ಪ್ರೇಮ ವೈಫಲ್ಯ ಕಂಡ ಕಾರಣಕ್ಕಾಗಿ ಮಾನಸಿಕವಾಗಿ ನೊಂದುಕೊಂಡ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ.
ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಚಿನ್ ಬಂಟ್ವಾಳದ ಲೆವಿನ್ ಇಲೆಕ್ಟಿಕಲ್ ಕಂಪೆನಿಯಲ್ಲಿ ಇಲೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಚಿನ್. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು. ಮುಂಜಾನೆ ಸುಮಾರು 3 ಗಂಟೆಯ ವೇಳೆ ಈತನ ಸ್ಕೂಟರ್ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಮೈದಾನದ ಬಳಿ ನಿಲ್ಲಿಸಲಾಗಿತ್ತು.
ಆದರೆ ಸಚಿನ್ ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಪೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಪೋನ್ ರಿಂಗ್ ಕೇಳುತ್ತಿತ್ತು ಎಂದು ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದು, ಇದೀಗ ಚೀಟಿ ಪೋಲೀಸರ ಕೈ ಸೇರಿದೆ. ಪ್ರೇಮ ವೈಫಲ್ಯವೇ ಆತ್ಮಹತ್ಯೆ ಕಾರಣ ಎಂಬ ಈತ ಚೀಟಿಯಲ್ಲಿ ಬರೆದಿದ್ದ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ.
ವಿಮಾನ ನಿಲ್ದಾಣದಿಂದ 11 ಲಕ್ಷ ಮೌಲ್ಯದ ಚಿನ್ನ ವಶ
ಮಂಗಳೂರು: ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರಿಂದ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸುಮಾರು ಹನ್ನೊಂದು ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಓರ್ವ ಪ್ರಯಾಣಿಕ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನನ್ನು ತಪಾಸಣೆ ನಡೆಸಿದಾಗ ಆತನ ಕೆನ್ನೆಯ ಭಾಗ ಊದಿಕೊಂಡಂತೆ ಭಾಸವಾಗಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ನಡೆಸಿದಾಗ ಬಾಯಿಯ ಒಳಗೆ ಎರಡು ಚಿನ್ನದ ತುಂಡುಗಳನ್ನು ಬಚ್ಚಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಇದೆ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ತನ್ನ ತಲೆಕೂದಲಿಗೆ ಹಾಕಿಕೊಂಡಿದ್ದ ಬ್ಯಾಂಡ್ ನಲ್ಲಿ ರೇಡಿಯಂ ಲೇಪಿತ ಮಣಿಯಂತಹ ಹೇರ್ ಬ್ಯಾಂಡ್ ಗಳು ಪತ್ತೆಯಾಗಿದೆ ಇದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲೂ ಚಿನ್ನವನ್ನು ಕರಗಿಸಿ ಲೇಪನ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರ ಬಳಿ ಒಟ್ಟು 11 ಲಕ್ಷ ಮೌಲ್ಯದ 191 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ
ಕಾಡಾನೆ ದಾಳಿ, ಕೃಷಿ ನಾಶ: ಜೀವ ಭಯ
ಸುಳ್ಯ: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ದಲ್ಲಿ ತೋಟಗಳಿಗೆ ಕಾಡಾನೆ ದಾಳಿ ಮುಂದುವರಿದಿದೆ. ಕಳೆದ ವಾರ ಇಲ್ಲಿನ ಚಾಕೋಟೆ ಭಾಗದ ತೋಟಗಳಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಕೃಷಿ ಹಾನಿಗೊಳಿಸಿತ್ತು. ಈ ವಾರ ದಲ್ಲಿ ಮೂರು ದಿನಗಳಿಂದ ಚಾಕೋಟೆ, ಬೊಳುಗಲ್ಲು ಭಾಗದಲ್ಲಿ ಆನೆಗಳು ಕೃಷಿ ಹಾನಿ ಮಾಡಿವೆ ಜಗದೀಶ್ ಅವರ ತೋಟದಲ್ಲಿ ತೆಂಗಿನ ಗಿಡ, ಅಡಿಕೆ ಮರ, ಬಾಳೆ ಗಿಡಗಳನ್ನು ಮಗುಚಿ, ಹಾನಿಗೊಳಿಸಿವೆ. ನೀರಾವರಿ ಪೈಪ್ನ್ನು ಪುಡಿ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.