ಶಿಕಾರಿ ಮಾಡಿದ್ರೆ ಈಗ ಕೇಸ್!?
– ಹುಲಿ ಉಗುರು ಆಯ್ತು ಈಗ ಜಿಂಕೆ ಕೊಂಬು ಪತ್ತೆ!
– ಓರ್ವ ಆರೋಪಿ ಅರೆಸ್ಟ್: ಉತ್ತರ ಕನ್ನಡದ ಜೋಯಿಡಾದಲ್ಲಿ ಘಟನೆ
– ತುಮಕೂರಲ್ಲಿ ನವಿಲು ಶಿಕಾರಿ ಮಾಡಿದವರು ಅರೆಸ್ಟ್
NAMMUR EXPRESS NEWS
ಕಾರವಾರ: ಹುಲಿ ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು, ಹುಲಿ ಚರ್ಮ, ಜಿಂಕೆ ಚರ್ಮ, ಕೊಂಬು ಸೇರಿದಂತೆ ವನ್ಯ ಜೀವಿಗೆ ಸಂಬಂಧಿಸಿದ ಯಾವುದೇ ವಸ್ತು ಸಂಗ್ರಹಿಸಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ. ಉತ್ತರ ಕನ್ನಡದ ಜೋಯಿಡಾದಲ್ಲಿ ಮನೆಯೊಂದರಲ್ಲಿ ಜಿಂಕೆ ಕೊಂಬು ಇದ್ದ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಜಿಂಕೆ ಕೊಂಬು ವಶಕ್ಕೆ ಪಡೆದಿದ್ದಾರೆ. ಜೋಯಿಡಾದ ಶಿವಾಜಿ ವೃತ್ತದ ಮನೆಯೊಂದರಲ್ಲಿ ಎರಡು ಜಿಂಕೆ ಕೊಂಬುಗಳು ಇದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ನಾಯ್ಕ ಎಂಬಾತನನ್ನು ಬಂಧಿಸಿದ್ದಾರೆ ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಶಿಕಾರಿ ಮಾಡುವವರ ಮೇಲೆ ನಿಗಾ!
ರಾಜ್ಯದಲ್ಲಿ ವನ್ಯ ಜೀವಿ ಉಳಿಸಲು ಮಹತ್ವದ ಹೆಜ್ಜೆ ಇಟ್ಟಿರುವ ಅರಣ್ಯ ಇಲಾಖೆ ವನ್ಯ ಜೀವಿ ಹತ್ಯೆ ನಿರ್ಬಂಧಕ್ಕೆ ಗಟ್ಟಿ ಹೆಜ್ಜೆ ಇಟ್ಟಿದೆ. ಈಗಾಗಲೇ ಹುಲಿ ಉಗುರು, ಜಿಂಕೆ ಕೊಂಬು ಸೇರಿ ಅನೇಕ ಪ್ರಾಣಿ ಸಂಬಂಧಿಸಿದ ಉತ್ಪನ್ನಗಳನ್ನು ಹಾಕುವವರ ಮೇಲೆ ಕ್ರಮಕ್ಕೆ ಮುಂದಾಗಿದೆ. ಈ ನಡುವೆ ಶಿಕಾರಿ ಮಾಡುವವರ ಮೇಲೂ ಕ್ರಮ ಜರುಗಿಸಲು ಮುಂದಾಗಿದೆ. ತುಮಕೂರಲ್ಲಿ ನವಿಲು ಶಿಕಾರಿ ಮಾಡಿದವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ.