ಟಗರು ಪಲ್ಯದಲ್ಲಿ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್
– ರಾಜ್ಯದ ಸಿನಿ ಪ್ರಿಯರ ಮೆಚ್ಚುಗೆ ಪಡೆದ ಸಿನಿಮಾ
– ಡಾಲಿ ಧನಂಜಯ್ ನಿರ್ಮಾಣದ ಹಳ್ಳಿ ಕಥೆ ಸಿನಿಮಾ
– ಹುಲಿ ಕಾರ್ತಿಕ್ ನಟನೆ: ಎಲ್ಲೆಡೆ ಒಳ್ಳೆ ರೆಸ್ಪಾನ್ಸ್
NAMMUR EXPRESS NEWS
ಹಳ್ಳಿ ಸೊಗಡಿನ ಕಥೆಯನ್ನು ಇಟ್ಟುಕೊಂಡು ನಿರ್ಮಾಣವಾದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆದ ಉದಾಹರಣೆ ಇದೆ. ಇತ್ತೀಚೆಗೆ ಇಂಥ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬಹುದು. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಟಗರು ಪಲ್ಯ’ ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ಉಮೇಶ್ ಕೆ. ಕೃಪಾ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಡಾಲಿ ಧನಂಜಯ್ ಅವರು ಒಂದು ವಿಶಿಷ್ಠವಾದ ಕಥೆಗೆ ಬಂಡವಾಳ ಹೂಡಿದ್ದಾರೆ. ಪ್ರತಿಭಾವಂತ ಕಲಾವಿದರ ಸಂಗಮದಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಹಲವು ಭಾವಗಳ ಮಿಶ್ರಣದಂತೆ ‘ಟಗರು’ ಸಿನಿಮಾ ಮೂಡಿಬಂದಿದೆ.
ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಟಗರು ಪಲ್ಯ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಕಾಡಿನೊಳಗೆ ಇರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಹಾನಿ ಇದರಲ್ಲಿ ಇದೆ. ಕುರಿಯನ್ನು ಬಲಿ ಕೊಡುವುದಕ್ಕೂ ಮುನ್ನ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು. ತಲೆ ಅಲ್ಲಾಡಿಸದ ಹೊರತು ಕುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ. ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭದಲ್ಲಿ ಎದುರಾಗುವ ಪ್ರಸಂಗಗಳು ಹೇಗಿರುತ್ತದೆ ಎಂಬುದನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ನಿರ್ದೇಶಕ ಉಮೇಶ್. ಪಕ್ಕಾ ಹಳ್ಳಿ ಸೊಗಡಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕಥೆಗೆ ತಕ್ಕಂತೆಯೇ ಭಾಷೆಯ ಬಳಕೆ ಆಗಿದೆ. ಆ ವಿಚಾರದಲ್ಲಿ ‘ಟಗರು ಪಲ್ಯ’ ಗಮನ ಸೆಳೆಯುತ್ತದೆ.
ಸಿನಿಮಾದಲ್ಲಿ ಯಾರು ಯಾರಿದ್ದಾರೆ?
ನಾಗಭೂಷಣ ಹೀರೋ, ಅಮೃತಾ ಪ್ರೇಮ್ ಹೀರೋಯಿನ್. ಆದರೆ ಅವರನ್ನೂ ಮೀರಿಸುವ ರೀತಿಯಲ್ಲಿ ರಂಗಾಯಣ ರಘು ಮತ್ತು ತಾರಾ ಅನುರಾಧಾ ಅವರ ಪಾತ್ರಗಳು ಮೂಡಿಬಂದಿವೆ. ಇಡೀ ಸಿನಿಮಾವನ್ನು ರಂಗಾಯಣ ರಘು ಅವರು ಆವರಿಸಿಕೊಂಡಿದ್ದಾರೆ. ಚಿತ್ರಾ ಶೆಣೈ, ವಾಸುಕಿ ವೈಭವ್, ಶ್ರೀನಾಥ ವಸಿಷ್ಠ, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಸೇರಿದಂತೆ ಎಲ್ಲ ಕಲಾವಿದರು ‘ಟಗರು ಪಲ್ಯ’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಏನನ್ನೂ ಮಾಡದೇ ಸುಮ್ಮನೇ ನಿಂತರೂ ಕೂಡ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತದೆ. ಅದು ಕೂಡ ಪ್ರಮಖ ಪಾತ್ರವಾಗಿ ಆಕರ್ಷಿಸುತ್ತದೆ.
ನಾಗಭೂಷಣ-ಅಮೃತಾ ಜೋಡಿ ಕಮಾಲ್
‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾಗೆ ಇದು ಮೊದಲ ಸಿನಿಮಾ. ಅವರ ವಯಸ್ಸಿಗೆ ತಕ್ಕಂತಹ ಪಾತ್ರವೇ ಇಲ್ಲಿ ಅವರಿಗೆ ಸಿಕ್ಕಿದೆ. ಹದಿಹರೆಯದ ಹುಡುಗಿಯ ತಳಮಳಗಳನ್ನು ಅವರು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಮೊದಲಾರ್ಧದಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲವಾದರೂ ಪ್ರೀ-ಕ್ಲೈಮ್ಯಾಕ್ಸ್ ವೇಳೆಗೆ ಅವರ ಪಾತ್ರ ಹೆಚ್ಚು ಮುನ್ನೆಲೆಗೆ ಬರುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಅವರು ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ರೀತಿಯಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ನಾಗಭೂಷಣ ಅವರು ಹೀರೋ ಎಂಬುದಕ್ಕಿಂತಲೂ ಎಲ್ಲರ ನಡುವೆ ಇರುವ ಒಬ್ಬ ಸಾಮಾನ್ಯ ಹುಡುಗನಾಗಿ, ಒಂದು ಪಾತ್ರವಾಗಿ ಆವರಿಸಿಕೊಳ್ಳುತ್ತಾರೆ. ತಮಗೆ ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.
ಪಾತ್ರ ವರ್ಗದಲ್ಲಿ ಯಾರು ಯಾರು?
ಚಿತ್ರ: ಟಗರು ಪಲ್ಯ. ನಿರ್ಮಾಣ: ಡಾಲಿ ಧನಂಜಯ್. ನಿರ್ದೇಶನ: ಉಮೇಶ್ ಕೆ. ಕೃಪ. ಪಾತ್ರವರ್ಗ: ನಾಗಭೂಷಣ, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧಾ, ಚಿತ್ರಾ ಶೆಣೈ, ವಾಸುಕಿ ವೈಭವ್, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಮುಂತಾದವರು.
ಹುಲಿ ಕಾರ್ತಿಕ್ ನಟನೆ
ಮಲೆನಾಡ ಕಲಾವಿದ ಮಜಾ ಭಾರತ ಖ್ಯಾತಿಯ ಕಾರ್ತಿಕ್ ಅವರ ನಟನೆ ಗಮನ ಸೆಳೆದಿದೆ. ಸಿನಿಮಾ ರಂಗದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸುತ್ತಿರುವ ಕಾರ್ತಿಕ್ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ.