ಕರಾವಳಿಯ ವಿನಯ್ ಅವರಿಗೆ ಎಸ್.ಬಿ. ಐ ಎಂಡಿ ಹುದ್ದೆ!
– ಉಡುಪಿ ಕಿನ್ನಿಮುಲ್ಕಿ ಮೂಲದ ಸಾಧಕ
– ಯುವ ಜನರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಆಸೆ!
NAMMUR EXPRESS NEWS
ಕರಾವಳಿ ದೇಶಕ್ಕೆ ಎಲ್ಲಾ ರಂಗದಲ್ಲೂ ಸೇವೆ ಸಲ್ಲಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರಾವಳಿ ಕಿಂಗ್ ಎಂದರೆ ತಪ್ಪಾಗಲಾರದು. ಇದೀಗ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಉಡುಪಿ ಮೂಲದ ವಿನಯ್ ಎಂ. ತೋನ್ಸೆ, ದೇಶದ ಬೃಹತ್ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ (ಎಸ್ಬಿಐ) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹುದ್ದೆಗೇರಿದ್ದಾರೆ. ಉಡುಪಿ ಜಿಲ್ಲೆಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹೋನ್ನತ ಹುದ್ದೆಗೇರಿದ ಮೊದಲಿಗರು ಅವರಾಗಿದ್ದಾರೆ. ಈ ಮೂಲಕ ರಾಜ್ಯದ ಹೆಸರನ್ನು ಅವರು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ್ದಾರೆ.
ಎಸ್. ಬಿ. ಐ ಕಾರ್ಯನಿರತ ಚೇರ್ಮನ್ ಮತ್ತು ಸಿಇಒ ದಿನೇಶ್ ಕುಮಾರ್ ಖರಾ ಹೊರತಾಗಿ, ಬ್ಯಾಂಕ್ನ ಆಡಳಿತ ಹಾಗೂ ವ್ಯವಹಾರವನ್ನು ಸುಸೂತ್ರವಾಗಿ ನಡೆಸಲು 4 ಎಂಡಿಗಳನ್ನು ಎಸ್ಬಿಐ ಹೊಂದಿದೆ. ಬ್ಯಾಂಕ್ನ ಎಂಡಿಯಾಗಿದ್ದ ಸ್ವಾಮಿನಾಥನ್ ಜಾನಕಿರಾಮನ್ ರಿಂದ ಇತ್ತೀಚೆಗೆ ತೆರವಾದ ಸ್ಥಾನಕ್ಕೆ ಎಸ್ಬಿಐ ಡೆಪ್ಯುಟಿ ಎಂಡಿಯಾಗಿದ್ದ ವಿನಯ್ ಎಂ ತೋನ್ಸೆ ಅವರನ್ನು ಆಯ್ಕೆ ಸಮಿತಿ ಶಿಫಾರಸಿನಂತೆ ಕೇಂದ್ರ ಸರಕಾರ ನೇಮಿಸಿದೆ.
ಅಜ್ಜ, ತಂದೆ ಎಲ್ಲರೂ ಉಡುಪಿಯವರು!
ವಿನಯ್ ಎಂ ತೋನ್ಸೆ ಅವರ ಅಜ್ಜ ತೋನ್ಸೆ ನಾರಾಯಣ ರಾವ್ ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಶಿಕ್ಷಕರಾಗಿದ್ದವರು. ಕಿನ್ನಿಮುಲ್ಕಿ ನಿವಾಸಿ, ಅಪ್ಪ ಮುರಳೀಧರ ರಾವ್ ಕಂದಾಯ ಇಲಾಖೆಯಲ್ಲಿದ್ದು ಸಣ್ಣ ಉಳಿತಾಯ ಮತ್ತು ಲಾಟರಿ ಇಲಾಖೆ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದರು, ತಾಯಿ ಕೃಷ್ಣಾಬಾಯಿ. ಬೆಂಗಳೂರಿನ ರಾಜಾಜಿನಗರ, ಇಂದಿರಾ ನಗರದಲ್ಲಿ ಪ್ರಾಥಮಿಕ/ಪ್ರೌಢ ಶಿಕ್ಷಣ, ಸೈಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಬಿಕಾಂ, ಸೆಂಟ್ರಲ್ ಕಾಲೇಜಿನಿಂದ ಎಂಕಾಂ ಪದವಿ, ತೋನ್ಸೆ ಸತೀಶ್ ರಾವ್ (ಕಸಿನ್) ಪ್ರೇರಣೆಯಿಂದ ಎಸ್ಬಿಐ ಪ್ರೊಬೆಷನರಿ ಅಧಿಕಾರಿಯಾಗಿ ಮೂರು ದಶಕಗಳಿಂದ ಕಾರ್ಯನಿರತ ರಾಗಿದ್ದಾರೆ.
ಕ್ರೀಡೆ, ಕನ್ನಡ ಸೇವೆಯಲ್ಲೂ ಮುಂದು!
ಡಾ. ರಾಜ್ ಕುಮಾರ್ ಬಗ್ಗೆ ವಿನಯ್ ಅವರಿಗೆ ಅಭಿಮಾನ. ಬಿಕಾಂ ಪದವಿ ಓದಿನ ಸಂದರ್ಭ ನಟ ಪ್ರಕಾಶ್ ರೈ ಸಹಪಾಠಿಯಾಗಿ, ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಸಂಘದಲ್ಲಿ ಸಕ್ರಿಯವಾಗಿದ್ದರು. ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಪ್ರಕಾಶ್ ಜತೆ ನಟಿಸಿದ್ದರು. ಕಾಲೇಜು ದಿನಗಳಲ್ಲಿ ಬಿಲ್ವಿದ್ಯೆ ಪ್ರವೀಣ ವಿನಯ್, ರಾಜ್ಯ ಮಿನಿ ಒಲಂಪಿಕ್ಸ್ನಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದರು, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಯುವ ಜನತೆ ದೇಶದ ಅಸ್ತಿ ಎಂದ ವಿನಯ್
ಭಾರತೀಯ ಆರ್ಥಿಕತೆಗೆ ಅಮೃತ ಕಾಲದಲ್ಲಿ ಉಜ್ವಲ ಭವಿಷ್ಯವಿದೆ, ಪ್ರಗತಿ ಸಾಧನೆ ಸಾಧ್ಯವಿದೆ. ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬ್ಯಾಂಕುಗಳ ನೆರವು ಅಗತ್ಯ. ಯಾವುದೇ ವೃತ್ತಿ ಕ್ಷೇತ್ರವೇ ಇರಲಿ…ಧೈರ್ಯ, ಆತ್ಮವಿಶ್ವಾಸದಿಂದ ದೇಶಕ್ಕೆ ಕೊಡುಗೆ ನೀಡಬೇಕು ಸರಕಾರದ ನೆರವು ಪಡೆದು ಉದ್ಯೋಗ ಸೃಷ್ಟಿಗೆ ಯುವಜನರಿಗೆ ಉತ್ತಮ ಅವಕಾಶವಿದೆ. ಪ್ರತಿಯೊಬ್ಬರಲ್ಲೂ ಇರುವ ಶಕ್ತಿ, ಸಾಮಥ್ರ್ಯದ ಸದ್ಭಳಕೆಯಾಗಬೇಕು, ಹಳ್ಳಿಗಳಲ್ಲೂ ಪ್ರಗತಿ ಸಾಧಿಸಬೇಕು. 2025ರ ಬಳಿಕ ಉನ್ನತ ಹುದ್ದೆಗಿಂತಲೂ ಯುವಜನರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿಯಿದೆ.