ಮಹಿಳೆಯ ಮೊಬೈಲ್ ಕದ್ದು ಹಣ ಡ್ರಾ!
– ಬೆಳ್ತಂಗಡಿಯಲ್ಲಿ ನಡೆದ ಘಟನೆ: ಏನಿದು ಕೇಸ್?
– ಮಂಗಳೂರು: ಲೋಕಾಯುಕ್ತ ಪೊಲೀಸ್ ಬಲೆಗೆ ವಿಎ
ಬೆಳ್ತಂಗಡಿ : ಇನೋವಾ ಕಾರು ಕಳ್ಳತನ ಮಾಡಿದ ನಾಲ್ವರ ಬಂಧನ
NAMMUR EXPRESS NEWS
ಬೆಳ್ತಂಗಡಿ: ಮಹಿಳೆಯೊಬ್ಬರ ಮೊಬೈಲ್ ಫೋನ್ ಕದ್ದಾತ, ಫೋನ್ ಪೇ ಮೂಲಕ ಹಣ ಕದ್ದ ಘಟನೆ ನಡೆದಿದೆ. ಅದೇ ಮೊಬೈಲ್ ನ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಘಟನೆ ನ.9ರಂದು ನಡೆದಿದೆ. ಕುವೆಟ್ಟು ಗ್ರಾಮದ ಅಭಿದಾಬಾನುರವರು ನ.9ರಂದು ಬೆಳಿಗ್ಗೆ ಮನೆಯಲ್ಲಿ ಇರದಿದ್ದ ವೇಳೆ, ಅವರ ಪರಿಚಯಸ್ಥರಾದ ಸಿದ್ದಿಕ್ ಎಂಬಾತ ಅಂದಾಜು ರೂ.8000 ಮೌಲ್ಯದ ಮೊಬೈಲನ್ನು ಕದ್ದು ಬಳಿಕ ಸದ್ರಿ ಮೊಬೈಲ್ನಲ್ಲಿ ಪೋನ್ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪರ್ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿದ್ದಾನೆ. ಆರೋಪಿಗಳು ಅಭಿದಾಬಾನು ಅವರ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವ ಹಿನ್ನೆಲೆಯಲ್ಲಿ ನ.23ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಅಧಿಕಾರಿ!
ಮರಣ ದೃಢೀಕರಣಕ್ಕಾಗಿ ಲಂಚದ ಪಡೆಯುತ್ತಿದ್ದ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ವಿಎ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮರಣ ದೃಢೀಕರಣ ಪತ್ರಕ್ಕಾಗಿ ದೂರುದಾರರಿಂದ 13,000 ರೂ. ಲಂಚ ಪಡೆದ ಆರೋಪದಲ್ಲಿ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿ ದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ತಿಳಿಸಿದ್ದಾರೆ.
ಇನೋವಾ ಕಾರು ಕಳ್ಳತನ ಮಾಡಿದ ನಾಲ್ವರ ಬಂಧನ
ಬೆಳ್ತಂಗಡಿ: ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಅಜಯ್ ಶೆಟ್ಟಿ ,ಸೂರಜ್ ಶೆಟ್ಟಿ , ಮಂಜುನಾಥ ಪೂಜಾರಿ , ಕಿಶೋರ್. ಟಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ನ.9ರಂದು ರಾತ್ರಿ 10 ಗಂಟೆ ಸಮಯಕ್ಕೆ ಇಸಾಕ್ ಎಂಬವರ ಅಕ್ಕನ ಮಗ ನೌಫಲ್ ಎಂಬವರು ತಮ್ಮ ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ನೌಫಾಲ್ ನ ಗೆಳೆಯ ಸೈಪುದ್ದಿನ್ ಎಂಬಾತನ ಗೆಳೆಯರಾದ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿಯವರು ಬಾಡಿಗೆಗೆ ನೀಡುವಂತೆ ಕೇಳಿದಾಗ ನೀಡದೇ ಇದ್ದುದ್ದರಿಂದ ಸದ್ರಿ ಕಾರನ್ನು ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಕಳವು ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ತಂಡ ಧರ್ಮಸ್ಥಳ ಎಸ್ ಐ ಅನಿಲ್ ಕುಮಾರ್ ನೇತೃತ್ವದ ತಂಡ ಕಳ್ಳತನವಾದ ಇನೋವಾ ಕಾರು ಸಮೇತ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಇದೀಗ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.