ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು!
– ಅಡಿಕೆ ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಸರ್ಕಾರ
– ಅಡಿಕೆ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ?
NAMMUR EXPRESS NEWS
ಬೆಳಗಾವಿ: ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ ಅವರು ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉತ್ತರಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಪರಿಷತ್ ಸದಸ್ಯ ರುದ್ರೇಗೌಡ, ಎಲೆ ಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರ್ಕಾರ ರೋಗ ನಿಯಂತ್ರಣ ಮಾಡಲು ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರ ನೀಡಿದ್ದು, ಈ ಎಲೆ ಚುಕ್ಕೆ ರೋಗ ರೈತರಿಗೆ ತೊಂದರೆ ಕೊಡುತ್ತಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು. ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.
ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ ಮಾಡಿದ್ದ ಸರ್ಕಾರ
ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು. ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ ಸಂಶೋಧನೆಯ ಉದ್ದೇಶಕ್ಕಾಗಿಯೇ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು.