ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೆಪ್!
– ಕಳ್ಳರನ್ನು ಸೆರೆ ಹಿಡಿದ ಗ್ರಾಮಸ್ಥರು
– ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ದಂಡ
– ಶಿಕಾರಿಪುರ : ಅಡಿಕೆಗೆ ಸಸಿ ಕಡಿತಲೆ
NAMMUR EXPRESS NEWS
ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯ ಹೊರವಲಯದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳನ್ನ ಜನರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಕಳೆದ ಹಲವು ದಿನಗಳಿಂದ ತಾಲೂಕಿನ ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಕರ್ಕಿಕೊಪ್ಪ ಗ್ರಾಮದಲ್ಲಿ ಕಳೆದೊಂದು ವಾರದಲ್ಲಿ 3 ಮನೆಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ ಗೀಜಗಾರು, ಮಂಕಳಲೆ, ಹಳೆ ಇಕ್ಕೇರಿಗಳಲ್ಲಿ ತಲಾ ಒಂದೊಂದು ಕಳವು ಪ್ರಕರಣ ವರದಿಯಾಗಿದೆ.
ಈ ಮಧ್ಯೆ ಕರ್ಕಿಕೊಪ್ಪದ ಮನೆಯೊಂದರ ಹಿಂಭಾಗದಿಂದ ಕಳ್ಳರು ನುಗ್ಗಲು ಯತ್ನಿಸಿದ್ದರು. ಮನೆಯವರು ಊಟ ಮುಗಿಸಿ ಹೊರ ಬರುವುದನ್ನು ಅರಿತ ಕಳ್ಳರು ಹೊರಗಿನ ತಂತಿ ಬೇಲಿ ಹಾರಿಕೊಂಡು ಕಾರು ಹತ್ತಿ ಪರಾರಿಯಾಗಿದ್ದಾರೆ. ಅವರನ್ನ ಫಾಲೋ ಮಾಡಿದ ಗ್ರಾಮಸ್ಥರ ಹಿಂಡು, ವರದಹಳ್ಳಿ ಕ್ರಾಸ್ ಬಳಿ ಕಾರನ್ನ ಅಡ್ಡಗಟ್ಟಿದ್ದಾರೆ. ಇದರ ನಡುವೆ ಗ್ರಾಮಸ್ಥರ ಮೇಲೂ ಕಾರು ಹರಿಸುವ ಪ್ರಯತ್ನವನ್ನ ಕಳ್ಳರು ನಡೆಸಿದ್ದಾರೆ. ಅಂತಿಮವಾಗಿ ರಸ್ತೆ ಅಡ್ಡಗಟ್ಟಿ ಕಳ್ಳರ ಕಾರನ್ನ ತಡೆದ ಗ್ರಾಮಸ್ಥರು ಎರಡು ಬಡಗಿ ಬಿಟ್ಟು ಪೊಲೀಸರನ್ನ ಕರೆಸಿ, ಕಳ್ಳರನ್ನ ಹಾಗೂ ಅವರು ಹೋಗುತ್ತಿದ್ದ ಒಮಿನಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ದಂಡ
ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ಮತ್ತು ವೀಲಿಂಗ್ ನಡೆಸಲು ಸಹಕರಿಸಿದ ಬೈಕ್ ಮಾಲೀಕನಿಗೂ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ. ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದರು. ಈ ಬಗ್ಗೆ ಗುನ್ನೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಕುರಿತು ತನಿಖಾಧಿಕಾರಿಗಳಾಗಿ ಪಿಎಸ್ಐ ತಿರುಮಲೇಶ್ ರನ್ನ ನೇಮಿಸಲಾಗಿತ್ತು. ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿದ್ದರು.ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಅದೇಶಿಸಿದ್ದಾರೆ.
ಶಿಕಾರಿಪುರ : 30ಕ್ಕೂ ಹೆಚ್ಚು ಅಡಿಕೆಗೆ ಸಸಿ ಕಡಿತಲೆ
ಶಿಕಾರಿಪುರ : ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಕಡಿದಿದ್ದಾರೆ. ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರೈತ ಮಂಜಪ್ಪ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ಸುಮಾರು 30 ಅಡಿಕೆ ಸಸಿಗಳನ್ನು ಕಡಿದು ಹಾಕಲಾಗಿದೆ. ವಿಷಯ ತಿಳಿದು ಕಾಂಗ್ರೆಸ್ ಮುಖಂಡ ನಾಗರಾಜ ಗೌಡ ಸೇರಿದಂತೆ ಹಲವರು ಭೇಟಿ ನೀಡಿದ್ದರು.
ಶಿವಮೊಗ್ಗದಲ್ಲಿ ಬೈಕ್ ಕಳ್ಳತನ
ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಹೊಸ ಪಲ್ಸರ್ ಬೈಕ್ ಕಳ್ಳತನವಾಗಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲಲಿತಮ್ಮ ಎಂಬುವವರ ಹೆಸರಿನಲ್ಲಿದ್ದ ಪಲ್ಸರ್ ಬೈಕ್ ಅನ್ನು ಅವರ ಮಗ ಚಲಾಯಿಸುತ್ತಿದ್ದರು. ನ.26ರಂದು ರಾತ್ರಿ ಕೆಲಸ ಮುಗಿಸಿ ಬಂದು ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಲಲಿತಮ್ಮ ಅವರು ಮನೆಯಿಂದ ಹೊರಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಲಲಿತಮ್ಮ ಮತ್ತು ಅವರ ಮಗ ಬಳಿಕ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಜೂನ್ ತಿಂಗಳಲ್ಲಿ ಆ ಬೈಕ್ ಖರೀದಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದರು.