ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ಭಕ್ತ!
– ಕರಾವಳಿಯ ಕಾರ್ಣಿಕದ ದೈವ ಕೊರಗಜ್ಜನ ಪವಾಡ
– ಒಂದು ವರ್ಷದಿಂದ ಹರಕೆಗೆ ಸಿದ್ಧತೆ: ಏನಿದು ಹರಕೆ?
NAMMUR EXPRESS NEWS
ತುಳುನಾಡ ಕೊರಗಜ್ಜ ಸ್ವಾಮಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ. ವ್ಯಕ್ತಿಯೊಬ್ಬರು ತಾನು ಹೊತ್ತ ಹರಕೆ ಈಡೇರಿಸಿದರು ಎಂಬ ಕಾರಣಕ್ಕೆ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮದ್ಯದ ಸಮಾರಾಧನೆ ಮಾಡಿದ್ದಾರೆ!. ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮ ಇದೀಗ ಗಮನ ಸೆಳೆದಿದೆ. ಕರಾವಳಿಯ ದೈವರಾದನೆಯು ಜನರ ನಂಬಿಕೆಯ ಮೇಲೆ ನಿಂತಿದೆ. ಭಕ್ತರ ಬೇಡಿಕೆಯನ್ನು ಕ್ಷಣಮಾತ್ರದಲ್ಲಿ ಈಡೇರಿಸುವ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಮೆಚ್ಚಿನ ದೈವ, ಸ್ವಾಮಿ ಕೊರಗಜ್ಜನಿಗೆ ಭಕ್ತರ ಹರಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕರಾವಳಿ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸ್ವಾಮಿ ಕೊರಗಜ್ಜರ ಭಕ್ತರು ಕ್ಷೇತ್ರಗಳಿಗೆ ಬರುತ್ತಾರೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ರವಿಚಂದ್ರ ಅವರು ಈ ಕೊರಗಜ್ಜ ಸನ್ನಿಧಿಯ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಹರಕೆ ಸಲ್ಲಿಸಲು ಸುಮಾರು ಒಂದು ವರ್ಷ ಹಿಡಿಸಿದೆ. ಹಣ ಹೊಂದಿಸಿಕೊಂಡು ನಿಧಾನವಾಗಿ ಮದ್ಯದ ಬಾಟಲಿಗಳನ್ನು ಒಟ್ಟುಗೂಡಿಸಿಕೊಂಡು ದೇವರಿಗೆ ಸಲ್ಲಿಸಿದ್ದಾರೆ. ಕುಟುಂಬ ಸಮೇತವಾಗಿ ಬಂದು ಹರಕೆಯನ್ನು ಸಲ್ಲಿಸಿದ್ದಾರೆ. ಕೊರಗಜ್ಜ ಸನ್ನಿಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮದ್ಯದ ಹರಕೆ ಸಲ್ಲಿಕೆ ಆಗಿರುವುದು ಇದೇ ಮೊದಲ ಬಾರಿಯಾಗಿದೆ.