ರಾಜ್ಯಕ್ಕೆ ಮಾದರಿಯಾಯ್ತು ‘ಸಮರ್ಪಣ’ ತಂಡ!
– ತಮ್ಮ ಗ್ರಾಮದ ಅಭಿವೃದ್ಧಿಗೆ ಜೀವನ ಸಮರ್ಪಣೆ
– ಹತ್ತು ಹಲವು ಅಭಿವೃದ್ಧಿ ಕೆಲಸಕ್ಕೆ 7 ಮಂದಿಯ ಪ್ರೇರಣೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ರಾಮಕೃಷ್ಣಪುರ ಸಮೀಪದ ಸಮರ್ಪಣ ತಂಡ ಇದೀಗ ತನ್ನ ಊರಿನ ಅಭಿವೃದ್ಧಿ ಕೆಲಸಕ್ಕೆ ತಮ್ಮ ಗಳಿಕೆಯ ಒಂದಷ್ಟು ಹಣ ಮೀಸಲಿಟ್ಟು ಅದನ್ನು ವಿವಿಧ ಅಭಿವೃದ್ಧಿ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. 7 ಮಂದಿ ಸಮಾಜಪರ ಚಿಂತನೆಯ ಯುವಕರು ಮತ್ತು ವಿವಿಧ ಕೆಲಸ ಮಾಡುವವರ ತಂಡ ಸೇರಿ ತಮ್ಮ ಊರಿನ ಅನೇಕ ಅಭಿವೃದ್ಧಿ ಕೆಲಸಗಳಿಗೆ ತಮ್ಮ ತಿಂಗಳಿನ ಆದಾಯದಲ್ಲಿ ಒಂದಷ್ಟು ಹಣವನ್ನು ಒಟ್ಟುಗೂಡಿಸಿ ಆ ಕೆಲಸವನ್ನು ತಿಂಗಳ ಒಂದು ದಿನದಲ್ಲಿ ಮಾಡುವ ಮೂಲಕ ಹೊಸ ಕಲ್ಪನೆಯೊಂದಿಗೆ ಈಗಾಗಲೇ ಹತ್ತಾರು ಕೆಲಸ ಮಾಡಿದ್ದಾರೆ.
9 ವಿವಿಧ ಕ್ಷೇತ್ರದ ಕೆಲಸ!
ಸೇವಾ ಮನೋಭಾವದ ತಂಡ ಎಲ್ಲಾ ಗ್ರಾಮಕ್ಕೂ ಮಾದರಿಯಾಗಿದ್ದು, ಈಗ ಎಲ್ಲೆಡೆ ಈ ತರದ ಕಲ್ಪನೆಗಳು ಹುಟ್ಟಿಕೊಳ್ಳಲು ಸಹಕಾರಿಯಾಗಿದೆ. ಸಮರ್ಪಣ ತಂಡದ ಏಳು ಮಂದಿ ಕೂಡ ವಿವಿಧ ಇಲಾಖೆ ಹಾಗೂ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಸಮಯ ಹಾಗೂ ಹಣವನ್ನು ಪ್ರತಿ ತಿಂಗಳು ಒಗ್ಗೂಡಿಸಿದ್ದಾರೆ. ಇನ್ನೂ ಗ್ರಾಮದ ನೈರ್ಮಲ್ಯ, ಅಭಿವೃದ್ಧಿ, ಸ್ವಚ್ಛತೆ, ಕನ್ನಡ ಕಾರ್ಯಕ್ರಮಗಳು, ಪ್ರಾಣಿ ಸೇವಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಾಡಿದ 9 ಕಾರ್ಯಕ್ರಮದಲ್ಲೂ ತಮ್ಮ ವಿಭಿನ್ನತೆಯನ್ನು ತೋರಿಸಿದ್ದಾರೆ. ಈ ಮೂಲಕ ಅವರು ತಮ್ಮ ಸಮಾಜ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಗುರಿಯನ್ನು ಹೊಂದಿದ್ದಾರೆ.
ಸಮಾಜದ ಸಮಸ್ಯೆಗೆ ಮೂಲದಲ್ಲೇ ಪರಿಹಾರ!
ಸಮರ್ಪಣ ತಂಡದಲ್ಲಿ ಒಬ್ಬರಾದ ರಾಮಕೃಷ್ಣಪುರದ ಶಿಕ್ಷಕ ನಾಗರಾಜ್ ಅವರು ಮಾತನಾಡಿ ಸಮರ್ಪಣ ತಂಡವು ತಮ್ಮ ಜೀವನದ ಕೆಲವು ಸಮಯವನ್ನು ಸಮಾಜಕ್ಕೆ ಸಮರ್ಪಣೆ ಮಾಡುವುದಾಗಿದೆ. ಇಂಥ ಕಲ್ಪನೆಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಸಮರ್ಪಣ ತಂಡದ ಈ ಕಾರ್ಯಕ್ರಮ ಎಲ್ಲೆಡೆ ಎಲ್ಲ ಗ್ರಾಮಗಳಲ್ಲೂ ಶುರುವಾಗಬೇಕೆಂಬುದು ನಮ್ಮ ಆಸೆ. ಏಕೆಂದರೆ ಈ ಮೂಲಕ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಜೊತೆಗೆ ಸಣ್ಣ ಸಣ್ಣ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರ ಸಿಗುತ್ತದೆ. ಹೀಗಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಹಲವು ಪ್ಲಾನ್..!
ಅಪಘಾತ ತಪ್ಪಿಸಲು ರಸ್ತೆಗಳಲ್ಲಿ ವೇಗ ತಡೆ, ಜಾನುವಾರುಗಳಿಗೆ ರೇಡಿಯಂ ಬೆಲ್ಟ್, ಪ್ರತಿಭಾವಂತರ ಮನೆಗೆ ತೆರಳಿ ಸನ್ಮಾನ, ವನ ಮಹೋತ್ಸವ, ಬಸ್ ನಿಲ್ದಾಣ ಸ್ವಚ್ಛತೆ, ಕನ್ನಡ ದೀಪೋತ್ಸವ, ಮಕ್ಕಳಿಗೆ ರಾಮಾಯಣ ಪರೀಕ್ಷೆ , ಪ್ರಾಣಿಗಳಿಗೆ ರೇಬಿಸ್ ಚಿಕಿತ್ಸೆ, ಬೀದಿ ನಾಯಿಗಳ ಸಂತಾನ ಹರಣ, ಬಸ್ ಸ್ಟ್ಯಾಂಡ್ ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧಕ್ಕಾಗಿ ಬಟ್ಟೆ ಚೀಲ ವಿತರಣೆ, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಮರ್ಪಣ ತಂಡ ಇದುವರೆಗೂ ಮಾಡಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲನ್ನು ಎದುರಿಸಲು ಪ್ರಶ್ನಾಕೋಠಿ ತಯಾರಿಸಿ ಪರೀಕ್ಷೆಗಳನ್ನು ನಡೆಸಲು ಇದೀಗ ಸಿದ್ಧತೆ ನಡೆಸುತ್ತಿದ್ದಾರೆ…
ಒಟ್ಟಿನಲ್ಲಿ ಇವರ ಕೆಲಸಗಳಿಗೆ ಶುಭಾಶಯ ಸಲ್ಲಿಸುತ್ತಾ ಇಂತಹ ಸಮಾನ ಮನಸ್ಕರ ತಂಡ ಪ್ರತೀ ಊರಿನಲ್ಲಿಯೂ ಆದಾಗ ಊರಿನ ಬೆಳವಣಿಗೆ ಖಂಡಿತಾ ಸಾಧ್ಯ ಎಂಬುದು ನಮ್ಮ ಆಶಯ.