ಕರಾವಳಿ: 3 ವರ್ಷದಲ್ಲಿ 40 ಮಂದಿ ಗಡಿಪಾರು!
– ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗಡಿಪಾರು
– ಉಡುಪಿ ನಗರಸಭೆ ಉಪಚುನಾವಣೆ: ಮದ್ಯ ಮಾರಾಟ ನಿಷೇಧ
NAMMUR EXPRESS NEWS
ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ಅಕ್ರಮ ಗೋ ಸಾಗಾಟ, ಹಲ್ಲೆ, ದೊಂಬಿ, ಮಟ್ಕಾ, ಮಾದಕ ದ್ರವ್ಯಗಳ ಸಾಗಾಟ, ಕೊಲೆಯತ್ನ ಹಾಗೂ ನಿರಂತರ ಅಪರಾಧಿಕ ಪ್ರಕರಣದಲ್ಲಿ ಭಾಗಿಯಾಗಿರುವ ಒಟ್ಟು 69 ಅಪರಾಧಿಗಳಲ್ಲಿ 40 ಮಂದಿಯನ್ನು ಗಡಿಪಾರು ಮಾಡಲಾಗಿದೆ. ನಿರಂತರ ಅಪರಾಧಿ ಕೃತ್ಯಗಳಲ್ಲಿ ಪಾಲ್ಗೊಳ್ಳುವವರನ್ನು ಚುನಾವಣೆ ಸಂದರ್ಭದಲ್ಲಿ ಗಡಿಪಾರು ಮಾಡುವ ರೂಢಿ ಹಿಂದಿನಿಂದಲೂ ಇದೆ. ಅದಾಗ್ಯೂ ವಿವಿಧ ಪ್ರಕರಣ ಅಥವಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಗಡಿಪಾರು ಮಾಡಲಾಗುತ್ತದೆ.
ಗಡಿಪಾರು ಹೇಗೆ?
ಗಲಭೆ ಸೃಷ್ಟಿಸುವವರು ಅಥವಾ ಪ್ರಚೋಧನಕಾರಿ ಭಾಷಣಗಳ ಮೂಲಕ ಗಲಭೆಗೆ ಪ್ರೇರೇಪಣೆ ನೀಡುವವರು ಸಮಾವೇಶಗಳಲ್ಲಿ ಭಾಗ ವಹಿಸದಂತೆ ಅಥವಾ ಅಪರಾಧಿ ಕೃತ್ಯಗಳಲ್ಲಿ ಪಾಲ್ಗೊಳ್ಳುವ ವರನ್ನು ಕರ್ನಾಟಕ ಪೊಲೀಸ್ ಕಾಯ್ದೆ 1963 ಕಾಲಂ 54ರಿಂದ 63ರಂತೆ ಗಡೀಪಾರು ಮಾಡಲಾಗುತ್ತದೆ. ಗಡೀಪಾರು ಮಾಡುವ ವ್ಯಕ್ತಿಯ ಕುರಿತು ಪೊಲೀಸ್ ಇಲಾಖೆಯಿಂದ ಜಿಲ್ಲಾಧಿಕಾರಿ / ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಆ ಪ್ರಸ್ತಾವನೆ ಆಧಾರದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತದೆ. ಅನಂತರ ಗಡಿಪಾರು ಪ್ರಕ್ರಿಯೆ ನಡೆಯುತ್ತದೆ. ಗಡಿಪಾರು ಅವಧಿ ಚುನಾವಣೆ ಅಥವಾ ವಿಶೇಷ ಸಮಾವೇಶ ಇತ್ಯಾದಿ ಸಂದರ್ಭ ಗಳಲ್ಲಿ ಕೆಲವರನ್ನು ಗುರುತಿಸಿ 6 ತಿಂಗಳ ಮಟ್ಟಿಗೆ ಗಡೀಪಾರು ಮಾಡಲಾಗುತ್ತದೆ. ಗಡೀಪಾರು ನೋಟಿಸ್ಗೆ ಸರಿಯಾಗಿ ಸಮಜಾಯಿಶಿಯನ್ನು ಲಿಖಿತ ರೂಪದಲ್ಲಿ ನೀಡುವವರನ್ನು ಗಡಿಪಾರಿನಿಂದ ಕೈಬಿಡಲಾಗುತ್ತದೆ. ಪ್ರಕರಣದ ತೀವ್ರತೆಯ ಆಧಾರದಲ್ಲಿ ಗಡೀಪಾರು ಅವಧಿ ನಿಗದಿಯಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. ಉಡುಪಿಯಲ್ಲಿ 2021, 2022 ಹಾಗೂ 2023ರಲ್ಲಿ 18 ಮಂದಿಗೆ ಗಡಿಪಾರಿಗಾಗಿ ನೋಟಿಸ್ ನೀಡಲಾಗಿತ್ತು.
ಇವರಲ್ಲಿ 12 ಮಂದಿಯನ್ನು ಗಡೀಪಾರು ಮಾಡಲಾಗಿದೆ. ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದ 5, ಹಲ್ಲೆ ಮತ್ತು ದೊಂಬಿ ಪ್ರಕರಣದ 5, ಮಟ್ಕಾ 1. ಮಾದಕ ದ್ರವ್ಯ ಸಾಗಾಟ ಪ್ರಕರಣದ 2 ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿಯನ್ನು ಗಡೀಪಾರು ಮಾಡಲಾಗಿದೆ. ದ.ಕ.ದಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ಯಾರನ್ನು ಗಡೀಪಾರು ಮಾಡಿಲ್ಲ. 2023ನೇ ಸಾಲಿನಲ್ಲಿ 51 ಮಂದಿಗೆ ನೋಟಿಸ್ ನೀಡಲಾಗಿದ್ದು, 28 ಮಂದಿಯನ್ನು ಗಡೀಪಾರು ಮಾಡಲಾಗಿದೆ. ಅಪರಾಧಿಕ ಹಿನ್ನೆಲೆಯುಳ್ಳವರಾಗಿದ್ದು ಸಾರ್ವಜನಿಕ ಜೀವ ಮತ್ತು ಸ್ವತ್ತುಗಳ ರಕ್ಷಣೆ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು 28 ಮಂದಿಯನ್ನು ಗಡೀಪಾರು ಮಾಡಲಾಗಿದೆ.
ಉಡುಪಿ ನಗರಸಭೆ ಉಪಚುನಾವಣೆ: ಮದ್ಯ ಮಾರಾಟ ನಿಷೇಧ
ಉಡುಪಿ: ಉಡುಪಿ ನಗರಸಭೆಯ 13 ನೇ ಮೂಡು ಪೆರಂಪಳ್ಳಿ ವಾರ್ಡ್ ಉಪಚುನಾವಣೆಯು ಡಿಸೆಂಬರ್ 27 ರಂದು ನಡೆಯಲಿರುವ ಹಿನ್ನೆಲೆ, ಡಿ.26 ರ ಬೆಳಗ್ಗೆ 6 ಗಂಟೆಯಿಂದ ಡಿ. 27 ರ ರಾತ್ರಿ 12 ಗಂಟೆಯವರೆಗೆ ಸದರಿ ವಾರ್ಡ್ ನ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್ ಹಾಗೂ ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಲು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.