ಭತ್ತದ ಫಸಲು ಕಡಿಮೆ: ಅಕ್ಕಿಗೆ ಹಾಹಾಕಾರ!?
– ಭತ್ತದ ಫಸಲು ಕಟಾವು: ಹುಲ್ಲಿಗೆ ಭಾರಿ ಡಿಮ್ಯಾಂಡ್
– ಮಲೆನಾಡು, ಕರಾವಳಿಯಲ್ಲಿ ಕಡಿಮೆಯಾದ ಭತ್ತದ ಬೆಳೆ
NAMMUR EXPRESS NEWS
ಮಲೆನಾಡು/ಕರಾವಳಿ: ಒಂದು ಕಡೆ ಭತ್ತದ ಬೆಳೆ ಬೆಳೆಯುವವರೆ ಇಲ್ಲವಾಗಿದೆ. ಇನ್ನೊಂದು ಕಡೆ ಫಸಲು ಕಡಿಮೆಯಾಗಿದ್ದು ಮುಂದಿನ ದಿನದಲ್ಲಿ ಅಕ್ಕಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಭತ್ತದ ಫಸಲು ಕಟಾವು ಬಳಿಕ ಈಗ ಹುಲ್ಲಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.ಮಲೆನಾಡು, ಕರಾವಳಿಯಲ್ಲಿ ಕಡಿಮೆಯಾದ ಭತ್ತದ ಬೆಳೆ ಈಗ ಆತಂಕಕ್ಕೆ ಕಾರಣ ಆಗಿದೆ.
ಮಳೆ ಕೊರತೆ: ಈ ವರ್ಷ ಮಳೆ ಕೊರತೆಯ ಕಾರಣ ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಭತ್ತದ ಬೆಳೆ ವಾಡಿಕೆಗಿಂತ ಕಡಿಮೆಯಾಗಿದೆ. ಕರಾವಳಿ ಹಾಗೂ ಮಲೆನಾಡಿನ ಬಹುತೇಕ ಭತ್ತದ ಗದ್ದೆಗಳು ಮಳೆಯಾಶ್ರಿತ ಭೂಮಿಯಾಗಿದೆ. ಜುಲೈ ತಿಂಗಳಿನಲ್ಲಿ ಕೇವಲ 15 ದಿನ ಮಾತ್ರ ಧಾರಾಕಾರ ಮಳೆಯಾಗಿದ್ದು ಬಿಟ್ಟರೆ ಉಳಿದ ದಿನಗಳು ಕೇವಲ ತುಂತುರು ಮಳೆಯಷ್ಟೆ. ಕೆರೆ, ಹೊಳೆ, ಹಳ್ಳಗಳ ಅಕ್ಕಪಕ್ಕ ಇರುವ ತಗ್ಗಿನ ಗದ್ದೆಯಲ್ಲಿ ತೇವಾಂಶ ಇರುವ ಕಾರಣ ಒಂದಿಷ್ಟು ಭತ್ತದ ಫಸಲು ಕೈಗೆ ದೊರೆತಿದೆ.ಮಕ್ಕಿ ಗದ್ದೆ, ಹಕ್ಕಲು ಪ್ರದೇಶದ ಜಮೀನಿನಲ್ಲಿ ಪ್ರತಿ ವರ್ಷ ಭತ್ತ ಬೆಳೆಯಲಾಗುತ್ತಿದೆ. ಆದರೆ, ಈ ವರ್ಷ ಇಂತಹ ಜಮೀನಿನಲ್ಲಿ ನೀರಿನ ತೀವ್ರ ಕೊರತೆ ಕಾರಣ ನಾಟಿ ಮಾಡಿದ ಒಂದು ತಿಂಗಳಿನಲ್ಲಿಯೇ ಭೂಮಿಯ ತೇವಾಂಶ ಕ್ಷೀಣಿಸಿ ಭತ್ತದ ಸಸಿ ಹುಲುಸಾಗಿ ಬೆಳೆಯಲು ಸಾಧ್ಯವಾಗಿಲ್ಲ. ಈಗ ಬಹುತೇಕ ಭತ್ತದ ಫಸಲು ಕಟಾವು ನಡೆದು ಹುಲ್ಲಿನ ಮಾರಾಟ ಆರಂಭವಾಗಿದೆ. ಇರುವ ಅಲ್ಪ ಸ್ವಲ್ಪ ಹುಲ್ಲಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಭತ್ತದ ಗದ್ದೆಗಳು ಅಡಿಕೆ ತೋಟ ಆಗುತ್ತಿವೆ..!
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತದ ಗದ್ದೆಗಳು ಅಡಕೆ ತೊಟಗಳಾಗಿ ಬದಲಾಗುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಭತ್ತ ಮತ್ತು ಹುಲ್ಲಿನ ಉತ್ಪತ್ತಿ ಕ್ಷಯಿಸುತ್ತಿದೆ. ಅಲ್ಲದೆ ಮುಖ್ಯ ಹೆದ್ದಾರಿ ಪಕ್ಕದ ಭತ್ತದ ಗದ್ದೆಗಳು ಲೇ ಔಟ್ಗಳಾಗಿ, ವಾಣಿಜ್ಯ ಮಳಿಗೆಗಳಾಗಿ ಭೂ ಪರಿವರ್ತಿವಾಗುತ್ತಿದ್ದು ಭವಿಷ್ಯದ ದಿನದಲ್ಲಿ ಭತ್ತದ ಕೃಷಿ ಇನ್ನಷ್ಟು ಕಡಿಮೆಯಾಗಿ ಜಾನುವಾರುಗಳ ಮೇವಿಗೆ ಕೊರತೆ ಅಧಿಕವಾಗಲಿದೆ.
ಹುಲ್ಲಿಗೆ ಭರ್ಜರಿ ಡಿಮ್ಯಾಂಡ್
ಯಂತ್ರಗಳ ಮೂಲಕ ಒಣ ಹುಲ್ಲುಪಿಂಡಿ ಕಟ್ಟಿ ಸಂಗ್ರಹಿಸಲಾಗುತ್ತಿದೆ. ಯಂತ್ರ ಚಲಿಸದ ಚಿಕ್ಕಚಿಕ್ಕ ಗದ್ದೆಗಳ ಭತ್ತದ ಹುಲ್ಲನ್ನು ಹೊರೆ ಕಟ್ಟಿ ರಾಶಿ ಹಾಕಲಾಗುತ್ತಿದೆ. ಒಣ ಹುಲ್ಲಿನ ಇಳುವರಿ ಕಡಿಮೆಯಿರುವ ಕಾರಣ ಹೆಚ್ಚಿನ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಹುಲ್ಲಿನ ಪಿಂಡಿಯೊಂದಕ್ಕೆ ರೂ. 220 ರಿಂದ 240ರ ವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ. ಹುಲ್ಲಿನ ಹೊರೆಯೊಂದಕ್ಕೆ ರೂ. 60 ರಿಂದ 80 ರೂ. ವರೆಗೂ ದರ ಸಿಗುತ್ತಿದೆ. ಅಲ್ಲದೆ ಸ್ಥಳೀಯ ಸುತ್ತಮುತ್ತಲಿನ ಹಲವು ಜನ ಹುಲ್ಲುಖರೀದಿಸುವ ಕಾರಣ ಹೊರ ಊರಿಗೆ ಮಾರಾಟಕ್ಕೆ ಸಿಗುತ್ತಿಲ್ಲ. ಹುಲ್ಲಿನ ಖರೀದಿದಾರರು ಮತ್ತು ದಲ್ಲಾಳಿಗಳು ಭತ್ತದ ಹೊಲಕ್ಕೆ ಮತ್ತು ರೈತರ ಮನೆ ಬಾಗಿಲಿಗೆ ಓಡಾಡುತ್ತಿದ್ದಾರೆ.