ನಾಲ್ವರನ್ನು ಕೊಂದ ಆರೋಪಿಗೆ ಜೈಲೇ ಗತಿ!
– ಪ್ರವೀಣ್ ಜಾಮೀನು ಅರ್ಜಿ ತಿರಸ್ಕರಗೊಳಿಸೋದ ಕೋರ್ಟ್
– ಕುಂದಾಪುರ: ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದ ಖದೀಮರು!
– ಮಂಗಳೂರು: ವಿವಿ ಕುಲಪತಿಯ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್!
NAMMUR EXPRESS NEWS
ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ಅರ್ಜಿಯನ್ನು ಸಲ್ಲಿಸಿದ ವಕೀಲ ಎಸ್.ಎನ್.ರಾಜೇಶ್ ಅವರು ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿದ್ದರು. ಕುರಿತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಅರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಈ ಆದೇಶವನ್ನು ನೀಡಿದರು.
ಅನ್ನ ಭಾಗ್ಯದ ಅಕ್ಕಿ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದ ಖದೀಮರು!
ಕುಂದಾಪುರ: ಅನ್ನ ಭಾಗ್ಯದ ಅಕ್ಕಿಯನ್ನು ಗೂಡ್ಸ್ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ಖಾರ್ವಿಕೇರಿ ಎಂಬಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕುಂದಾಪುರ ಮೇರಿಯ ಕೃಷ್ಣ ಎಂದು ಗುರುತಿಸಲಾಗಿದೆ. ಡಿ.28ರಂದು ಮಧ್ಯಾಹ್ನ ವೇಳೆ ಗೂಡ್ಸ್ ರಿಕ್ಷಾದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಕುಂದಾಪುರ ಆಹಾರ ನಿರೀಕ್ಷಕ ಸುರೇಶ ಎಚ್.ಎಸ್. ಖಚಿತ ಮಾಹಿತಿಯಂತೆ ಕುಂದಾಪುರ ಎಸ್.ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಯವರೊಂದಿಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು. ರಿಕ್ಷಾದಲ್ಲಿದ್ದ ಒಟ್ಟು 200 ಕೆ.ಜಿ ಅಕ್ಕಿಯನ್ನು ವಾಹನ ಸಹಿತ ವಶಪಡಿಸಿಕೊಂಡರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿ.ವಿ ಕುಲಪತಿಯ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ : ಕೇಸ್
ಮಂಗಳೂರು: ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರು ತನ್ನ ಹೆಸರಲ್ಲಿ ವಾಟ್ಸ್ಆ್ಯಪ್ ನಕಲಿ ಸಂದೇಶವನ್ನು ರವಾನಿಸುತ್ತಿರುವ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿ.30ರ ಮಧ್ಯಾಹ್ನದಿಂದ ಕುಲಪತಿಯ ಛಾಯಾಚಿತ್ರ ಬಳಸಿಕೊಂಡು ಮೊಬೈಲ್ವೊಂದರಿಂದ ಕೆಲವು ಪ್ರಾಧ್ಯಾಪಕರಿಗೆ ಸಂದೇಶಗಳನ್ನು ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಭಾರ ಕುಲಪತಿ ಒತ್ತಾಯಿಸಿದ್ದಾರೆ.