– ಚಲಿಸುತ್ತಿದ್ದ ಬಸ್ನಲ್ಲಿ ಆ್ಯಕ್ಸಲ್ ಬ್ಲೇಡ್ ಕಟ್!
– ಶಿರಸಿ: ಬೈಕ್ಗೆ ಡಿಕ್ಕಿ ಹೊಡೆದ ಕಾರು ಇಬ್ಬರಿಗೆ ಗಂಭೀರ ಗಾಯ!
– ಮೈಸೂರು: ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ!
– ಚಿತ್ರದುರ್ಗ: ನೀರಿನ ಟ್ಯಾಂಕ್ ನಲ್ಲಿ ತೇಲುತ್ತಿತ್ತು ವರ್ಷದ ಕೂಸು!
– ಬೆಳಗಾವಿ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು
– ಬಳ್ಳಾರಿ : ಅಕ್ರಮ ಗೋ ಸಾಗಾಟ ಪತ್ತೆ ಮಾಡಿದ ಪೊಲೀಸರು!
– ಬೆಳಗಾವಿ : ಪ್ರೀತಿ ಬೇಡ ಎಂದದ್ದಕ್ಕೆ ಪಂಚರ ಮನೆ ಧ್ವಂಸ ಮಾಡಿದ ಪುಂಡರು
NAMMUR EXPRESS NEWS
ಕಾರವಾರ: ಆ್ಯಕ್ಸಲ್ ಬ್ಲೇಡ್ ತುಂಡಾಗಿ ನಿಯಂತ್ರಣ ಕಳೆದುಕೊಂಡ ಬಸ್ವೊಂದು, ರಸ್ತೆ ಬದಿಗೆ ಉರುಳಿ ಬೀಳುವುದರಲ್ಲಿತ್ತು. ಆದರೆ ಸಾರ್ವಜನಿಕರೇ ಆಪದ್ಭಾಂಧವರಾಗಿ ಬಂದು ಅಪಾಯವನ್ನು ತಪ್ಪಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಸರ್ಕಾರಿ ಬಸ್ಸು ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.
ಚಲಿಸುತ್ತಿದ್ದಾಗಲೇ ಒಮ್ಮೆಲೇ ಬಸ್ಸಿನ ಹಿಂಬದಿ ಆ್ಯಕ್ಸಲ್ ಬ್ಲೇಡ್ ತುಂಡಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಆದರೆ ಇದನ್ನೂ ಕಂಡ ಸಾರ್ವಜನಿಕರು ಉರುಳುತ್ತಿದ್ದ ಬಸ್ಸನ್ನು ಹಿಡಿದು ನಿಲ್ಲಿಸಿದ್ದಾರೆ. ಈ ಅವಘಡದಲ್ಲಿ ಬಸ್ಸಿನಲ್ಲಿದ್ದ ಹಲವರಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಂಡಿಷನ್ ಇಲ್ಲದ ಡಕೋಟಾ ಬಸ್ಸನ್ನು ಓಡಾಡಲು ಬಿಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾಗುತ್ತಿದ್ದರಿಂದ ಕಾರವಾರ ಕೈಗಾ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೈಕ್ಗೆ ಡಿಕ್ಕಿ ಹೊಡೆದ ಕಾರು ಇಬ್ಬರಿಗೆ ಗಂಭೀರ ಗಾಯ!
ಶಿರಸಿ: ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಶಿರಸಿ ತಾಲೂಕಿನ ಹನುಮಂತಿ ಬಳಿಯ ಹಾಲಿನ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಸಿದ್ದಾಪುರ ತಾಲೂಕಿನ ಹೊಳೆಜಡ್ಡಿಯ ನಾಗಪತಿ ಗೌಡಾ ಹಾಗು ಹುಲಿಯಾ ಗೌಡಾ ಗಾಯಗೊಂಡವರು. ಗಾಯಾಳುಗಳನ್ನು ಶಿರಸಿ ಪಂಡಿತ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಬನವಾಸಿ ಭಾಗದಲ್ಲಿ ಒಂದು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸಿದೆ ಪರಾರಿಯಾಗಿತ್ತು. ಇದೀಗ ಶಿರಸಿ ತಾಲೂಕಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ.
ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ
ಮೈಸೂರು: ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಮತ್ತು ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ಪಟ್ಟಣದ ಹುಣಸೂರಿನ ಆರ್.ಟಿ.ಒ. ಕಚೇರಿ ಬಳಿ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಜೀಪು ಚಾಲಕ ಕೂಡಾ ಸೇರಿದ್ದಾನೆ. ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬ್ಯಾಟರಿ ಚಾಲಿತ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಜೀಪಿನಲ್ಲಿ ಒಟ್ಟು ಆರು ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರಿನ ಟ್ಯಾಂಕ್ ನಲ್ಲಿ ತೇಲುತ್ತಿತ್ತು ವರ್ಷದ ಕೂಸು!
ಚಿತ್ರದುರ್ಗ: ಆಕಸ್ಮಿಕವಾಗಿ ತೊಟ್ಟಿಗೆ ಬಿದ್ದ ಮಗುವೊಂದು ನೀರಲ್ಲಿ ಮುಳುಗಿ ಮೃತಪಟ್ಟಿದೆ. ಚಿತ್ರದುರ್ಗ ತಾಲೂಕಿನ ಹಳಿಯಾರು ಗ್ರಾಮದಲ್ಲಿಈ ಘಟನೆ ನಡೆದಿದೆ. ಒಂದೂವರೆ ವರ್ಷದ ಪಿಯಾ ಮೃತ ದುರ್ದೈವಿ. ಮಹಾರಾಷ್ಟ್ರ ಮೂಲದ ದತ್ತಾ ಜಾಧವ್ ದಂಪತಿ ಚಿತ್ರದುರ್ಗದ ಹಳಿಯೂರಲ್ಲಿ ವಾಸವಿದ್ದರು. ಜಾಧವ್ ಇದ್ದಿಲು ಸುಡುವ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದರು. ದಂಪತಿಗೆ ಮುದ್ದಾದ ಒಂದೂವರೆ ವರ್ಷದ ಮಗುವಿತ್ತು. ಸುಖಸಂಸಾರಕ್ಕೆ ಕಿಚ್ಚು ಹಚ್ಚುವಂತಿತ್ತು. ಆದರೆ ಮುದ್ದಾದ ಮಗಳು ಆಟವಾಡುತ್ತಾ ತೆರೆದಿದ್ದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ. ತುಂಬಾ ಸಮಯ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಮಗುವನ್ನು ಕಂಡಿದ್ದಾರೆ. ಕೂಡಲೇ ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅದಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ
ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ಬೆಳಗಾವಿ: ಮನೆಯ ಗೋಡೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಡಲಾ ಅಂಕಲಗಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ಚೆನ್ನಪ್ಪ ಮಾಯಾಪ್ಪ ಕುರಬರ (45) ಮೃತ ದುರ್ದೈವಿ. ಚೆನ್ನಪ್ಪ ಬೆಳಗಿನ ಸಮಯ ಮನೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ಕೆಳಗೆ ಬಿದ್ದ ಚೆನ್ನಪ್ಪ ಗಂಭೀರ ಗಾಯಗೊಂಡಿದ್ದಾರೆ. ದೊಡ್ಡ ಕಲ್ಲುಗಳು ಬಿದ್ದ ಪರಿಣಾಮ ಚೆನ್ನಪ್ಪ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಕ್ರಮ ಗೋ ಸಾಗಾಟ ಪತ್ತೆ ಮಾಡಿದ ಪೊಲೀಸರು!
ಬಳ್ಳಾರಿ: ಅಕ್ರಮವಾಗಿ ಗೋ ಕಳ್ಳ ಸಾಗಾಣಿಕೆ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿ ಪೊಲೀಸರು ಗೋವುಗಳ ರಕ್ಷಣೆ ಮಾಡಿದ್ದಾರೆ. ಗೋವು ತುಂಬಿದ್ದ ಲಾರಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ನಡೆದಿದೆ. ಸುಮಾರು 25ಕ್ಕೂ ಹೆಚ್ಚು ದನಗಳನ್ನು ತುಂಬಿಕೊಂಡಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಂದ್ರಪ್ರದೇಶದ ಅಜ್ಘರ್ ಹಾಗೂ ಜಾವೀದ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಆಂಧ್ರಪ್ರದೇಶದ ಅನಂತಪುರಕ್ಕೆ ಗೋ ಸಾಗಾಣಿಕೆ ಮಾಡಲಾಗುತ್ತಿತ್ತು. ಒಂದೇ ಲಾರಿಯಲ್ಲಿ ಸುಮಾರು 25ಕ್ಕೂ ಅಧಿಕ ಗೋವುಗಳನ್ನು ತುಂಬಿಕೊಂಡು ಅಕ್ರಮ ಸಾಗಾಣಿಕೆ ನಡೆಸಲಾಗುತ್ತಿತ್ತು. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿ ಬೇಡ ಎಂದದ್ದಕ್ಕೆ ಪಂಚರ ಮನೆ ಧ್ವಂಸ ಮಾಡಿದ ಪುಂಡರು!
ಬೆಳಗಾವಿ: ಹುಡುಗಿ ವಿಚಾರದಲ್ಲಿ ಹುಡುಗರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಬುದ್ಧಿಮಾತು ಹೇಳಿದ ಗ್ರಾಮದ ಪಂಚರ ಮನೆಗೇ ಹುಡುಗರು ದಾಳಿ ನಡೆಸಿ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದ ಘಟನೆಯಿದು. ರಾಯಚೂರಿನ ಒಂದು ಪ್ರೌಢಶಾಲೆಯಲ್ಲಿ ಗ್ಯಾಂಗ್ವಾರ್ ನಡೆದು ಎರಡು ತರಗತಿಯ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳಲು ಏರ್ಗನ್, ಬಟನ್ ಚಾಕು ಇತ್ಯಾದಿ ತಂದ ಪ್ರಕರಣ ನಿನ್ನೆ ನಡೆದಿತ್ತು. ಅದು ಇನ್ನೂ ಹಸಿರಾಗಿರುವಾಗಲೇ ಈ ಘಟನೆ ನಡೆದಿದೆ.
ನಾವಗೆ ಗ್ರಾಮದ ನಾಲ್ಕು ಮನೆಗಳ ಮೇಲೆ ದಾಳಿ ನಡೆದಿದೆ. ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ 20ಕ್ಕೂ ಅಧಿಕ ಪುಂಡರು ಮನೆಯ ಮುಂದೆ ನಿಲ್ಲಿದ್ದ ಕಾರು, ಮನೆಯ ಗ್ಲಾಸ್ ಒಡೆದು ಹಾಕಿದ್ದಾರೆ. ಎರಡು ಬೈಕ್, ಕಾರಿನ ಗ್ಲಾಸ್ ಒಡೆದು ಹಾಕಿ ಗಲಾಟೆ ಮಾಡಿ ಹೋಗಿದ್ದಾರೆ. ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಹುಡುಗಿಯೊಬ್ಬಳ ಪ್ರೀತಿಯ ವಿಚಾರಕ್ಕೆ ಗಲಾಟೆ ನಡೆದಿತ್ತು. ಓದುವ ವಯಸ್ಸಲ್ಲಿ ಪ್ರೀತಿ ಗೀತಿ ಎಂದು ಸಮಯ ವ್ಯರ್ಥ ಮಾಡುವುದು ತಪ್ಪು ಎಂದು ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಬುದ್ಧಿಮಾತು ಹೇಳಿದ್ದರು.ಇದರಿಂದ ವ್ಯಗ್ರರಾದ ಆರೋಪಿಗಳು ಪಂಚರ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ್ದಾರೆ.