– ಅಂಗನವಾಡಿ ಶಿಕ್ಷಕಿಯ ಮೂಗು ಕತ್ತರಿಸಿದ ವ್ಯಕ್ತಿ!
– 8 ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿತ್ತು ತೆಂಗಿನ ಕಾಯಿ ತುಂಡು!
– ಚಾಮರಾಜನಗರ: ಭಿಕ್ಷೆ ಬೇಡುವ ಹುಡುಗಿಯನ್ನು ಬಿಡದ ಕಾಮುಕರು
– ಬೆಳಗಾವಿ: ಮಹಿಳೆಯನ್ನು ಎರಡು ಬಾರಿ ಅರೆಬೆತ್ತಲೆಗೊಳಿಸಿ ಹಲ್ಲೆ.!
– ಮೈಸೂರು: ಎಲೆಕ್ಟ್ರಿಕ್ ಬಸ್-ಜೀಪ್ ಮಧ್ಯೆ ಭೀಕರ ಅಪಘಾತ!
– ಕೊಪ್ಪಳ : ಅಂಜನಾದ್ರಿಗೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ!
NAMMUR EXPRESS NEWS
ಅಂಗನವಾಡಿ ಶಿಕ್ಷಕಿಯ ಮೂಗು ಕತ್ತರಿಸಿದ ವ್ಯಕ್ತಿ!
ಬೆಳಗಾವಿ: ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿಯ ಮಕ್ಕಳು ಮನೆಯ ಆವರಣದಲ್ಲಿ ಬೆಳೆದಿದ್ದ ಮಲ್ಲಿಗೆ ಹೂ ಕಿತ್ತಿದ್ದಕ್ಕೆ ಶಿಕ್ಷಕಿಯ ಮೂಗನ್ನೇ ಕತ್ತರಿಸಿದ ಘಟನೆ ನಡೆದಿದೆ. ಸುಗಂಧಾ ಮೋರೆ (50) ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಮೂಗನ್ನು ಕತ್ತರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ್ದಾರೆ. ಸುಗಂಧಾ ಇದೀಗ ಚಿಕಿತ್ಸೆ ಪಡೆಯುತ್ತಿದ್ದು ಉಸಿರಾಟ ಹಾಗೂ ತೀವ್ರ ನೋವಿನಿಂದ ಪರದಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆದಿದ್ದ ಮಲ್ಲಿಗೆ ಹೂ ಕಿತ್ತಿದ್ದಾರೆ ಎಂಬ ಕ್ಷುಲಕ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
8 ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿತ್ತು ತೆಂಗಿನ ಕಾಯಿ ತುಂಡು!
ಮಗು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದೆ. ಅಳು ವಿಪರೀತವಾಗುತ್ತಿದ್ದಂತೆ ಪೋಷಕರಲ್ಲಿ ಸಹಜವಾಗಿ ಗೊಂದಲ,ಭಯ ಉಂಟಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಕೊನೆಗೆ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದ್ದು, ಮಗುವಿನ ಗಂಟಲಿನಲ್ಲಿ ಏನೋ ಸಿಲುಕಿರುವುದು ಕಂಡುಬಂದಿದೆ. ಆದ್ದರಿಂದ ಉಸಿರಾಟದ ತೊಂದರೆಯುಂಟಾಗಿ ಮಗು ಅಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಿಸಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ತೆಂಗಿನ ಕಾಯಿ ತುಂಡನ್ನು ಹೊರತೆಗೆದಿದ್ದಾರೆ. ಮಗುವಿನ ಶ್ವಾಸನಾಳದ ಬಳಿ ತೆಂಗಿನ ಕಾಯಿ ತುಂಡು ಸಿಕ್ಕಿಹಾಕಿಕೊಂಡಿತ್ತು. ವೈದ್ಯರ ತಂಡ ಎಚ್ಚರಿಕೆಯಿಂದ ಕಾಯಿಯನ್ನು ಹೊರತೆಗೆದಿದ್ದಾರೆ.
ಬಿಕ್ಷೆ ಬೇಡುವ ಹುಡುಗಿಯನ್ನು ಬಿಡದ ಕಾಮುಕರು
ಚಾಮರಾಜನಗರ: ಕೊಳ್ಳೇಗಾಲ ಬಸ್ ನಿಲ್ದಾಣದ ಕಾರಿನ ಬಳಿ ಹುಡುಗಿಯೊಬ್ಬಳು ಭಿಕ್ಷೆ ಬೇಡಲು ಹೋಗಿದ್ದಾಗ, ಕೇರಳದಿಂದ ಬಂದ ನಾಲ್ಕು ಯುವಕರ ಗುಂಪೊಂದು ಅವಳನ್ನು ಕಾರಿನೊಳಗೆ ಎಳೆದುಕೊಂಡು ಬಾಯಿಗೆ ಬಟ್ಟೆ ತುರುಕಿ ಕರೆದೊಯ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವಾಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮಧುವನಹಳ್ಳಿಯಲ್ಲಿ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ವಿಚಾರಕ್ಕೆ ಯುವಕರನ್ನು ತರಾಟೆಗೆ ತೆಗೆದುಕೊಂಡಾಗ ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಯಿಗೆ ಬಟ್ಟೆ ತುರುಕಿ ಕೂಡಿ ಹಾಕಿರುವುದು ಕಂಡುಬಂದಿದೆ. ಬಾಲಕಿಯನ್ನು ಗ್ರಾಮಸ್ಥರು ರಕ್ಷಿಸಿದ್ದು ಕಾರಿನಲ್ಲಿದ್ದ ಎಲ್ಲ ಯುವಕರಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ. ಬಾಲಕಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಅವರ ಕುಟುಂಬದೊಂದಿಗೆ ಸೇರಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಮಹಿಳೆಯನ್ನು ಎರಡು ಬಾರಿ ಅರೆಬೆತ್ತಲೆಗೊಳಿಸಿ ಹಲ್ಲೆ.!
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ತಿಗಡಿ ಗ್ರಾಮದಲ್ಲಿ ಮಹಿಳೆಯನ್ನು ಎರಡು ಸಲ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಮಹಿಳೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ 20 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ಮಾವನ ಹೆಸರಿನಲ್ಲಿ 6 ಎಕರೆ ಭೂಮಿ ಇದ್ದು, ಆ ಜಾಗವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ ಎಂದು ವೃದ್ಧರ ಸೊಸೆ ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಪ್ರಕರಣ ಬೈಲಹೊಂಗಲ ನ್ಯಾಯಾಲಯ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿದೆ.
ಆರೋಪಿಗಳಲ್ಲಿ ಕೆಲವರು ತಮ್ಮ ಜಮೀನಿಗೆ ನೀರು ಬಳಸಲು ಪೈಪ್ಲೈನ್ ಅಳವಡಿಸಿದ್ದರು. ಈ ಪೈಪ್ಲೈನ್ ಸಂತ್ರಸ್ತ ಮಹಿಳೆಯ ಜಮೀನಿಗೆ ಹೊಂದಿಕೊಂಡಿದೆ. ಇದರಿಂದ ಆಕೆ ಜಮೀನಿಗೆ ಹೆಚ್ಚು ನೀರು ನುಗ್ಗಿ ಬೆಳೆ ಹಾಳಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದರು. ಪೈಪ್ಲೈನ್ ತೆರವುಗೊಳಿಸಿದ್ದರು. ಈ ಕಾರಣದಿಂದಾಗಿ ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಜೀವ ಬೆದರಿಕೆ ಹಾಕಿ ಎರಡೆರಡು ಸಲ ಅರೆಬೆತ್ತಲೆ ನಡೆಸಿ ಹಲ್ಲೆ ಮಾಡಿದ್ದಾರೆ. 20 ಜನ ಸೇರಿಕೊಂಡು ಸಂತ್ರಸ್ತ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಕಲ್ಲಪ್ಪ ಡೊಂಕಣ್ಣವರ ಅವರ ಕುಮ್ಮಕ್ಕಿನಿಂದ ಕಲ್ಲಪ್ಪ ಡೊಂಕಣ್ಣವರ ಮತ್ತು ಅಡಿವೆಪ್ಪ ದಳವಾಯಿ ಅವರೇ ಹಲ್ಲೆ ಮಾಡಿದರು. ಸಂತ್ರಸ್ತೆ ಉಟ್ಟಿದ್ದ ಬಟ್ಟೆ ಎಳೆದಾಡಿ ಹರಿದರು. ಪೈಪ್ಲೈನ್ ಅನ್ನು ಮರಳಿ ಜೋಡಿಸದಿದ್ದರೆ ಜೀವಂತ ಬಿಡುವುದಿಲ್ಲವೆಂದು ಹೆದರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೈಸೂರು: ಎಲೆಕ್ಟ್ರಿಕ್ ಬಸ್-ಜೀಪ್ ಮಧ್ಯೆ ಭೀಕರ ಅಪಘಾತ!
ಮೈಸೂರು : ಹುಣಸೂರು ಪಟ್ಟಣದ RTO ಕಚೇರಿ ಬಳಿ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಮತ್ತು ಜೀಪ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವಿಗೀಡಾದ ಘಟನೆ ನಡೆದಿದೆ. ಸರ್ಕಾರಿ ಬ್ಯಾಟರಿ ಚಾಲಿತ ಬಸ್ ವಿರಾಜಪೇಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದು, ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ಜೀಪ್ ತೆರಳುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ. ಜೀಪಿನಲ್ಲಿ ಒಟ್ಟು 6 ಜನ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮಾರ್ಗ ಮಧ್ಯೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂಜನಾದ್ರಿಗೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ!
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದಿದೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ ಚಾಲನೆ ಮಾಡಿದ್ದಾರೆ ಅಂತ ಆರೋಪಿಸಿ ಸ್ಥಳೀಯರು ಜಗಳ ಎತ್ತಿದ್ದು, ಗಲಾಟೆ ವೇಳೆ ಭಕ್ತರು ಆಗಮಿಸಿದ್ದ ಬಸ್ಗಳಿಗೆ ಕಲ್ಲು ಎಸೆದಿದ್ದಾರೆ. ಉತ್ತರ ಪ್ರದೇಶದದಿಂದ ನಾಲ್ಕು ಬಸ್ಗಳಲ್ಲಿ ಹನುಮಂತನ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ವಾಪಸ್ ಆಗುತ್ತಿದ್ದಾಗ ಬಸ್ಗಳನ್ನು ತಡೆದ ಸ್ಥಳೀಯರು ಜಗಳ ಎತ್ತಿದ್ದಾರೆ.
ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ ಚಾಲನೆ ಮಾಡಿದ್ದಾರೆ. ಇದೇ ವಿಚಾರವಾಗಿ ಗಲಾಟೆ, ಮಾತಿನ ಚಕಮಕಿ ನಡೆದಿದ್ದು, ಉತ್ತರ ಪ್ರದೇಶದ ಬಸ್ ಮೇಲೆ ಸ್ಥಳೀಯರು ಕಲ್ಲೆಸೆದಿದ್ದಾರೆ. ಘಟನೆಯಲ್ಲಿ ಉತ್ತರಪ್ರದೇಶ ಮೂಲದ ರಾಮಕುಮಾರ್ ಹಾಗೂ ಮೋನು ಎಂಬವರ ತಲೆಗೆ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಖಂಡಿಸಿ ಗಂಗಾವತಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉತ್ತರ ಪ್ರದೇಶದ ನೂರಾರು ಭಕ್ತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.