– ವಿಮಾನ ನಿಲ್ದಾಣದಲ್ಲಿ ಜೀವಂತ ಗುಂಡು ಪತ್ತೆ.!
– 3 ತಿಂಗಳ ಗರ್ಭಿಣಿಯನ್ನು ಹೆಲ್ಮೆಟ್ನಿಂದ ಹೊಡೆದು ಕೊಂದು ಅಪಘಾತವೆಂದ ಪತಿ.!
– ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿ ಸಾವು!
– ಮಗನೊಂದಿಗೆ ಸೇರಿಕೊಂಡು ಪತಿಯನ್ನು ಕೊಂದ ಪತ್ನಿ!
NAMMUR EXPRESS NEWS
ಬೆಳಗಾವಿ : ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜೀವಂತ ಗುಂಡು ಸಮೇತ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಸೇನಾಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಸೇನಾಧಿಕಾರಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೈದ್ರಾಬಾದ್ಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಸೇನಾಧಿಕಾರಿಗಳು ಪ್ರಸ್ತುತ ಡೆಹ್ರಾಡೂನ್ನಲ್ಲಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ತರಬೇತಿ ಪಡೆಯಲು ಬೆಳಗಾವಿಯ ಕಮಾಂಡೋ ಸೆಂಟರ್ಗೆ ಬಂದಿದ್ದ ಇವರು ತರಬೇತಿ ಮುಗಿಸಿ ವಾಪಸ್ಸು ತೆರಳುವಾಗ ಬ್ಯಾಗ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಸಧ್ಯ ಅಧಿಕಾರಿಯನ್ನು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳು ಮಾರಿಹಾಳ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಸೇನಾಧಿಕಾರಿ ಬ್ಯಾಗ್ನಲ್ಲಿ ಜೀವಂತ ಗುಂಡು ಇರುವುದನ್ನು ಗಮನಿಸದೇ ಪ್ರಯಾಣಿಸುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ದಾವಣಗೆರೆ : 3 ತಿಂಗಳ ಗರ್ಭಿಣಿಯನ್ನು ಹೆಲ್ಮೆಟ್ನಿಂದ ಹೊಡೆದು ಕೊಂದು ಅಪಘಾತವೆಂದ ಪತಿ.!
ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಸಮೀಪ ಪತ್ನಿಯನ್ನು ಹೆಲ್ಮೆಟ್ನಿಂದ ಹೊಡೆದು ಕೊಂದು ಬಳಿಕ ಅಪಘಾತವಾಯ್ತು ಅಂತ ಹೇಳಿ ನಾಟಕವಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆ ಯಶೋದಾ ಎಂದು ತಿಳಿದು ಬಂದಿದ್ದು, ಈಕೆ 3 ತಿಂಗಳ ಗರ್ಭಿಯಾಗಿದ್ದಳು. ತಿಪ್ಪೇಶ್ (28) ಎಂಬಾತ ಕೊಲೆಗೈದ ಆರೋಪಿ ಪತಿ. ಇಬ್ಬರು ಪ್ರೀತಿಸಿ ಆರು ತಿಂಗಳ ಹಿಂದೆ ಮದುವೆ ಆಗಿದ್ದರು. ಅಂತೆಯೇ ಜನವರಿ 4 ರಂದು ಪತಿ ಜೊತೆ ಯಶೋದಾ ತವರಿಗೆ ಬಂದಿದ್ದಳು. ತವರು ಮನೆಯಿಂದ ವಾಪಸ್ಸು ಮರಳುವಾಗ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ ನೀಡಿದ್ದ. ಘಟನಾ ಸ್ಥಳಕ್ಕೆ ಬಂದು ಶವ ನೋಡಿದ ಯಶೋದಾಳ ತಂದೆಗೆ ಕೊಲೆ ಶಂಕೆ ವ್ಯಕ್ತವಾಗಿದೆ. ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಮೃತಪಟ್ಟಿಲ್ಲ, ಆಕೆಯ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ತಾನೇ ಹೊಡೆದು ಸಾಯಿಸಿದ್ದಾಗಿ ಪಾಪಿ ಪತಿ ತಪ್ಪೊಪ್ಪಿಕೊಂಡಿದ್ದಾನೆ.
ಕಾಸರಗೋಡು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿ ಸಾವು!
ಕಾಸರಗೋಡು: ರೈಲಿನ ಪ್ರಯಾಣದ ವೇಳೆ ಕಲ್ಲಿಕೋಟೆ ಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ಜೈಲಿನಿಂದ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣವೊಂದು ಕಾಸರಗೋಡು ಸಮೀಪದ ಪಳ್ಳಿಕೆರೆಯಲ್ಲಿ ನೆಡೆದಿದೆ. ಮೃತ ಯುವತಿ ವಯನಾಡ್ ಜೋಸೆಫ್ ಅಲಿಯಾಸ್ ಜೋಯ್-ಮೋಳಿ ಅಲಿಯಾಸ್ ಪ್ರೇಮ ದಂಪತಿ ಪುತ್ರಿ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ. ಈ ಯುವತಿ ಮಾರ್ಕೆಟಿಂಗ್ ಸಂಸ್ಥೆ ಯೊಂದರಲ್ಲಿ ಹೂಮನ್ ರಿಸೋರ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ನಿನ್ನೆ ಕಲ್ಲಿಕೋಟೆಯಿಂದ ಮಂಗಳೂರಿಗೆ ಕೆಲಸಕ್ಕೆ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ರಾತ್ರಿ ವೇಳೆ ಈ ಘಟನೆ ನಡೆದಿರಬಹುದು? ಪಳ್ಳಿಕೆರೆಯ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತ ದೇಹಪತ್ತೆಯಾಗಿದೆ! ರಾತ್ರಿ ವೇಳೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆ ಸ್ಥಳೀಯ ನಿವಾಸಿಗಳು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕಾಗಿ ಪ್ರಯಾಣ ಬೆಳೆಸುತ್ತಿದ್ದ ಯುವತಿ ಐಶ್ವರ್ಯ ಮಸಣದ ಹಾದಿ ಹಿಡಿದಿದ್ದಾಳೆ!! ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದ ಮೃತ ಯುವತಿಯ ಮನೆಯವರು ಕಾಸರಗೋ ಡಿನ ಜನರಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದಿರುವ ಕಾರಣ ಸಾಕಷ್ಟು ಅನುಮಾನಗಳು ಎದ್ದು ಕಾಣುತ್ತಿವೆ.
ಮೃತ ಐಶ್ವರ್ಯ ಅವರೆ ರೈಲಿನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರ ಬಹುದಾ? ಅಥವಾ ಚಲಿಸುತ್ತಿದ್ದ ರೈಲಿನಲ್ಲಿ ಇವರು ಬಾಗಿಲ ಬಳಿ ನಿಂತಿದ್ದಾಗ ಇವರಿಗೆ ಅರಿವಿಗೆ ಬಾರದ ಹಾಗೆ ಹಿಂಬದಿಯಿಂದ ಯಾರಾದರೂ ಕೆಳಕ್ಕೆ ತಳ್ಳಿರ ಬಹುದಾ? ಅಥವಾ ಬಾಗಿಲ ಬಳಿ ನಿಂತಿರುವ ಸಮಯದಲ್ಲಿ ಅಯಾ ತಪ್ಪಿ ಕೆಳಕ್ಕೆ ಬಿದ್ದಿರಬಹುದಾ? ಈ ಪ್ರಕರಣ ಪೋಲಿಸರಿಗೆ ಕಗ್ಗಂಟಾಗಿದ್ದು ಸಾಕಷ್ಟು ಅನುಮಾನವನ್ನು ಹುಟ್ಟು ಹಾಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದು ಇನ್ನಷ್ಟೆ ಈ ಸಾವಿನ ಸತ್ಯಾಸತ್ಯತೆ ಹೊರ ಬಿಳಬೇಕಿದೆ.
ಭದ್ರಾವತಿ: ಮಗನೊಂದಿಗೆ ಸೇರಿಕೊಂಡು ಪತಿಯನ್ನು ಕೊಂದ ಪತ್ನಿ!
ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸೀಗೆಬಾಗಿಯ ಈಶ್ವರ ದೇವಸ್ಥಾನದ ಬಳಿ ಇತ್ತೀಚೆಗೆ ಅಪರಿಚಿತ ಮೃತ ದೇಹವೊಂದು ಪತ್ತೆಯಾಗಿದ್ದು ಈ ಪ್ರಕರಣ ಈಗ ತಿರುವು ಪಡೆದುಕೊಂಡಿದೆ. ಪತ್ನಿ ಮತ್ತು ಪುತ್ರನಿಂದಲೇ ತಂದೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸೊರಬ ತಾಲೂಕಿನ ಯಲವಾಲ ಗ್ರಾಮದ ನಿವಾಸಿಯಾಗಿದ್ದ ಮೌನೇಶಪ್ಪ(50) ಎರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ಮಂಜುಳಾರವರ ಜೊತೆಗಿದ್ದ ಮೌನೇಶಪ್ಪ ಬ್ಯಾಡಗಿ ತಾಲೂಕಿನ ಮಸಣಗಿಯಲ್ಲಿ ವಾಸವಾಗಿದ್ದರು. ಎರಡನೇ ಪತ್ನಿಗೆ ಎರಡು ಮಕ್ಕಳು ಮತ್ತು ಮೊದಲನೇ ಹೆಂಡತಿ ಮಂಜುಳಾರಿಗೆ ಶಂಭು ಎಂಬ ಮಗನಿದ್ದನು.
ಪತ್ನಿ ಮಂಜುಳಾ ಮತ್ತು ಮೌನೇಶಪ್ಪ ನಡುವೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಮೌನೇಶಪ್ಪ ಜಗಳವಾದಾಗ ಮನೆಬಿಟ್ಟು ಹೋಗುವುದು ಮತ್ತು ವಾಪಾಸಾಗುವುದು ಮಾಮೂಲಿಯಾಗಿತ್ತು. ಜಗಳದ ಕುರಿತು ಮೌನೇಶಪ್ಪ ತನ್ನ ಅಳಿಯ ರಾಜಶೇಖರ್ ಮಲ್ಲಪ್ಪ ಕಲ್ಲೂರು ಬಳಿ ಹೇಳಿಕೊಂಡಿದ್ದರು.ಯಾವಾಗ ಒಂದು ವರ್ಷದಿಂದ ಮನೆಗೆ ವಾಪಾಸ್ ಆಗದ ಮೌನೇಶಪ್ಪನ ಅಳಿಯ ರಾಜಶೇಖರ್ ಮಲ್ಲಪ್ಪ ಕಟ್ಟೂರು ಮತ್ತೋರ್ವ ಮಾವ ಕರೆ ಮಾಡಿ ಕೇಳಿದಾಗ ಮಂಜುಳಮ್ಮ ಏರು ಧ್ವನಿಯಲ್ಲಿ ಪದೇ ಪದೇ ಕರೆ ಮಾಡಬೇಡಿ ಎಂದು ತಿಳಿಸಿರುತ್ತಾರೆ. ಇತ್ತ ಮಂಜುಳ ಮತ್ತು ಶಂಭು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪತಿ ಮೌನೇಶಪ್ಪ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು.
ಇತ್ತ ಭದ್ರಾವತಿಯ ಸೀಗೆಬಾಗಿ ಈಶ್ವರ ದೇವಾಲಯದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿರುತ್ತದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಅಪರಿಚಿತ ಶವ ಪತ್ತೆಯಾದ ಬೆನ್ನಲ್ಲೇ ಯುಡಿಆರ್ ದಾಖಲಿಸಿಕೊಂಡಿದ್ದರು. ಬ್ಯಾಡಗಿ ಪೊಲೀಸರು ನಾಪತ್ತೆ ಪ್ರಕರಣ ಬೆನ್ನುಹತ್ತಿಕೊಂಡು ಬಂದು ಪ್ರಕರಣ ಬೇಧಿಸಿದ್ದಾರೆ. ಮಂಜುಳ ಮತ್ತು ಪುತ್ರ ಶಂಭು ಇಬ್ಬರು ಆರೋಪಿಗಳು ಆಯನೂರಿನಲ್ಲಿ ಕೆಲಸಕ್ಕೆ ಬಂದಿದ್ದು ಅಲ್ಲೊಬ್ಬ ಎಳನೀರು ಕೊಚ್ಚುವ ಶಿವರಾಜ್ ಎಂಬುವನ ಸಹಾಯದಿಂದ ಮೌನೇಶಪ್ಪನ ಕೊಲೆ ಮಾಡಿರುವುದು ಪತ್ತೆಯಾಗಿದೆ. ಮಂಜುಳ, ಪುತ್ರ ಶಂಭು ಹಾಗೂ ಶಿವರಾಜ್ ಎಂಬುವರನ್ನ ಬಂಧಿಸಲಾಗಿದೆ.