– ಎಟಿಎಂ ಕಾರ್ಡ್ ಕದ್ದು ಹಣ ಎಗರಿಸುತ್ತಿದ ಕಳ್ಳರ ಬಂಧನ!
– ಕಾಸರಗೋಡು : ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದ ಪ್ರೊಫೆಸರ್!
– ಅಕ್ರಮ ಮರಳು ಸಾಗಾಟ ಪತ್ತೆ!
NAMMUR EXPRESS NEWS
ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಹರಿಯಾಣ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮೂರು ಪ್ರಕರಣಗಳು ಬೈಂದೂರು ಠಾಣೆಯಲ್ಲಿ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರ ತಂಡ ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಯಾಣ ರಾಜ್ಯ ಬರ್ಸಿ ಜಟಾನ್ನ ಸಂದೀಪ್ (36), ಹರಿಯಾಣ ಔರಂಗನಗರದ ರವಿ (27) ಬಂಧಿತ ಆರೋಪಿಗಳಾ ಗಿದ್ದು ಇವರಿಂದ 21 ಸಾವಿರ ನಗದು, 217 ಎಟಿಎಂ ಕಾರ್ಡ್, ಪಿಒಎಸ್ ಯಂತ್ರ, 2 ಮೊಬೈಲ್ ಹಾಗೂ ಒಂದು ಮೋಟಾರ್ ಸೈಕಲ್ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರು ಬಹುತೇಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ತಾನ ಕಡೆಗಳಲ್ಲಿ ಇಂತಹ ಕುಕೃತ್ಯಗಳನ್ನು ಎಸಗಿದ್ದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ. ಶಿರೂರು ಭಾಗದ ಎರಡು ಎಟಿಎಂ ಹಾಗೂ ಬೈಂದೂರಿನ ಒಂದು ಎಟಿಎಂ ಕೇಂದ್ರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ನೈಜ ಗ್ರಾಹಕರಿಗೆ ಹಣ ವಿಥ್ಡ್ರಾ ಮಾಡಲು ಸಹಕಾರ ಮಾಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿ ಮೂರು ಕಡೆ ಒಟ್ಟು 2 ಲಕ್ಷದ 26 ಸಾವಿರ ಹಣ ಎಗರಿಸಿದ್ದರು.
– ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದ ಪ್ರೊಫೆಸರ್
ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆರವಿರುವ ತಾತ್ಕಾಲಿಕ ಪ್ರಾಧ್ಯಾಪಕರ ಒಪ್ಪಂದದ ನವೀಕರಣೆ ಮತ್ತು ಪಿಎಚ್ಡಿಗೆ ಪ್ರವೇಶ ಕೊಡಿಸುವ ಹೆಸರಿನಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಪ್ರಸ್ತುತ ವಿ.ವಿ.ಯ ಸೋಶ್ಯಲ್ ವರ್ಕ್ ವಿಭಾಗದ ಪ್ರೊಫೆಸರ್ ಎ.ಕೆ.ಮೋಹನನ್ ಅವರನ್ನು ವಿಜಿಲೆನ್ಸ್ ಬಂಧಿಸಿದೆ. ಪ್ರಸ್ತುತ ವಿ.ವಿ.ಯ ಸೋಶ್ಯಲ್ ವರ್ಕ್ ವಿಭಾಗದಲ್ಲಿ ಒಪ್ಪಂದದ ಆಧಾರದಲ್ಲಿ ನಡೆಸಲಾದ ಅಧ್ಯಾಪಕ ನೇಮಕಾತಿಯ ಅವಧಿ ಡಿಸೆಂಬನರ್ಲ್ಲಿ ಕೊನೆಗೊಂಡಿತ್ತು. ಅದನ್ನು ನವೀಕರಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅದರಲ್ಲಿ ಮತ್ತೆ ನೇಮಕಾತಿ ಲಭಿಸಲು ಹಾಗು ಮುಂದೆ ಪಿಎಚ್ಡಿ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಸಲು ಹಾಗು ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಡಿಪಾರ್ಟ್ಮೆಂಟ್ ರಿಸರ್ಚ್ ಸಮಿತಿ ಅಂಗೀಕರಿಸಬೇಕಾಗಿದ್ದಲ್ಲಿ ಎರಡು ಲಕ್ಷ ರೂ. ಲಂಚ ಕೇಳಲಾಗಿದೆ ಎಂದೂ ಅದರ ಮೊದಲ ಕಂತನ್ನು ಜ.12 ರೊಳಗೆ ನೀಡಬೇಕೆಂದು ಮೋಹನನ್ ಆಗ್ರಹಿಸಿದ್ದರೆಂದು ರಾಜ್ಯ ವಿಜಿಲೆನ್ಸ್ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿತ್ತು.
– ಬಂಟ್ವಾಳ : ಅಕ್ರಮ ಮರಳು ಸಾಗಾಟ ಪತ್ತೆ
ಬಂಟ್ವಾಳ: ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವುದನ್ನು ಕಲೈಮಾರ್ ಪಿ ಪೊಲೀಸ್ ಉಪ ನಿರೀಕ್ಷಕರು, ತನಿಖೆ-1 ಬಂಟ್ವಾಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿದ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ನಡೆದಿದೆ. ಇಂದು ಬೆಳಿಗ್ಗಿನ ಜಾವ, ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ KA-21-C-6338 ಹಾಗೂ KA-19-AA-0245 ಅಕ್ರಮವಾಗಿ ಸರ್ಕಾರದ ಸೊತ್ತಾದ ಮರಳನ್ನು ಕಳವು ಮಾಡಿ ಸಾಗಿಸುತ್ತಿರುವುದನ್ನು ಕಲೈಮಾರ್ ಪಿ ಪೊಲೀಸ್ ಉಪ ನಿರೀಕ್ಷಕರು, ತನಿಖೆ-1 ಬಂಟ್ವಾಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.
ಮರಳನ್ನು ವಳಚ್ಚಿಲ ಎಂಬಲ್ಲಿಂದ ತುಂಬಿಸಿ ಸಾಗಾಟ ಮಾಡುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಲಾರಿ ಮಾಲಿಕ ಮೊಹಮ್ಮದ್ ಹನೀಫ್, ಮರಳನ್ನು ಒದಗಿಸಿದ ವಳಚ್ಚಿಲ್ ನ ಸತ್ತಾರ್, ಝಾಹಿದ್ ಮತ್ತು ಅತಾವುಲ್ಲಾ ಹಾಗೂ ಲಾರಿ ಚಾಲಕರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.