– ಉಡುಪಿ: ಲಾಭಾಂಶ ಪಡೆಯುವ ಆಸೆಯಿಂದ ಲಕ್ಷಾಂತರ ರೂ ಹಣವನ್ನು ಕಳೆದು ಕೊಂಡ ವೃದ್ಧ!
– ಮಂಗಳೂರು : ಹಾಡಹಗಲಿನಲ್ಲೇ ಮನೆಗೆ ನುಗ್ಗಿ ಚಿನ್ನ ಕದ್ದ ಕಳ್ಳರು
– ವಿದ್ಯಾರ್ಥಿಯ ಸಾವು: ಸಿಬಿಐ ತನಿಖೆ ಮುಂದುವರಿಕೆ
– ಪತ್ನಿಯ ಚಿನ್ನ ಕದ್ದ ಪತಿ
NAMMUR EXPRESS NEWS
ಉಡುಪಿ: ಟ್ರೇಡಿಂಗ್ನಿಂದ ಹೆಚ್ಚಿನ ಲಾಭಾಂಶ ಪಡೆಯುವ ಅಸೆಯಿಂದ ಅಪರಿಚಿತರು ಕಳುಹಿಸಿದ ಲಿಂಕ್ ಮೂಲಕ ವ್ಯವಹರಿಸಿದ ವ್ಯಕ್ತಿಯೊಬ್ಬರು 51,90,000 ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬಿ.ಚಂದ್ರಶೇಖರ ಹೆಗ್ಗೋಡು (70) ಎಂಬವರು ವಂಚನೆಗೊಳಗಾದವರು. ಇವರ ಮೊಬೈಲ್ಗೆ ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸಪ್ನಲ್ಲಿ ಸಂಪರ್ಕಿಸಿದರು. ಇದರ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಕೊಂಡ ಚಂದ್ರಶೇಖರ್, ಆರೋಪಿಗಳು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ 61.90 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದರು. ಆದರೆ ಹೇಳಿದ ಅವಧಿಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಿ ನೀಡದೇ ಮೋಸ ಮಾಡಿದರು. ಇದೀಗ ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಮಂಗಳೂರು : ಹಾಡಹಗಲಿನಲ್ಲೇ ಮನೆಗೆ ನುಗ್ಗಿ ಚಿನ್ನ ಕದ್ದ ಕಳ್ಳರು!
ಮಂಗಳೂರು: ಹಾಡಹಗಲಿನಲ್ಲೇ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಲಶೇಖರದ ಕೆಎಂಎಫ್ ಡೈರಿ ಸಮೀಪ ಇರುವ ನಂದಿನಿ ನಗರದಲ್ಲಿ ನಡೆದಿದೆ. ಅರುಣ್ ಎಚ್.ಎಸ್. ಅವರು ಜ. 11ರಂದು ಬೆಳಗ್ಗೆ 10.30ಕ್ಕೆ ಪತ್ನಿಯನ್ನು ಫರಂಗಿಪೇಟೆಗೆ ಬಿಟ್ಟು ಅಪರಾಹ್ನ 3 ಗಂಟೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಮನೆಯನ್ನು ಪರಿಶೀಲಿಸಿದಾಗ ಮನೆಯ ಬೆಡ್ರೂಮ್ನ ಶೆಲ್ನಲ್ಲಿದ್ದ ಕಪಾಟಿನ ಕೀಯನ್ನು ಬಳಸಿ ನೆಕ್ಲೆಸ್, ಕಿವಿಯೋಲೆ, ಮಗುವಿನ ಸರ, ಬ್ರಾಸ್ಲೆಟ್, ಕೈಬಳೆ, ರಿಂಗ್ಗಳು ಸೇರಿದಂತೆ ಅಂದಾಜು 3.50 ಲ.ರೂ. ಮೌಲ್ಯದ ಸುಮಾರು 87.05 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು : ವಿದ್ಯಾರ್ಥಿಯ ಸಾವು: ಸಿಬಿಐ ತನಿಖೆ ಮುಂದುವರಿಕೆ!
ಪಣಂಬೂರು: ತಣ್ಣೀರುಬಾವಿ ಬೀಚ್ಗೆ ಹೋಗುವ ದಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟ ಕೇರಳ ಮೂಲದ ವಿದ್ಯಾರ್ಥಿ ರೋಹಿತ್ ರಾಧಾಕೃಷ್ಣನ್ ಸಾವು ಅಪಘಾತವಲ್ಲ, ಕೊಲೆ ಎಂದು ಪೋಷಕರು ಕೇಸು ದಾಖಲಿಸಿದ ಬಳಿಕ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಕಳೆದ ಮೂರಾಲ್ಕು ತಿಂಗಳಲ್ಲಿ ಸತತ ನಾಲ್ಕು ಬಾರಿ ಸಿಬಿಐ ಅಧಿಕಾರಿಗಳು ಸ್ಥಳದ ತನಿಖೆ ಮುಂದುವರಿಸಿದ್ದಾರೆ. 2014ರ ಮಾರ್ಚ್ 23ರ ತಡರಾತ್ರಿ ನಡೆದ ಈ ಅಪಘಾತವನ್ನು ಕಂಡ ಪೋಷಕರು ಇದು ಅಪಘಾತವಲ್ಲ, ಕೊಲೆ ಎಂದು ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದು, ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ಮುಂದುವರಿಸಿದೆ.
ಪತ್ನಿಯ ಚಿನ್ನ ಕದ್ದ ಪತಿ!
ಬಂಟ್ವಾಳ: ಪತಿ ಉಮ್ಮರ್ ಫಾರೂಕ್ ಪತ್ನಿಯ ಚಿನ್ನ ಕದ್ದಿದ್ದು, ಆತನ ಸಹೋದರರಾದ ಮುಸ್ತಾಫಾ, ರಿಯಾಜ್, ಮೊಹಮ್ಮದ್, ಸಂಬಂಧಿಕರಾದ ದುಲೇಕಾ, ಆಸ್ಮಾ. ಅರ್ಷಿದಾ ಆರೋಪಿಗಳಾಗಿದ್ದಾರೆ. ಫಾತಿಮಾ ನೀಡಿದ ದೂರಿನಲ್ಲಿ ವಿವರಿಸಿದಂತೆ, ಸುಮಾರು 14 ವರ್ಷಗಳ ಹಿಂದೆ ಆಕೆಗೆ ಉಮ್ಮರ್ ಫಾರೂಕ್ ಜತೆ ವಿವಾಹವಾಗಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ಆರೋಪಿ ಪತಿ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳದ ಜತೆಗೆ ಹಲ್ಲೆಯನ್ನೂ ಮಾಡುತ್ತಿದ್ದನು. ಆತನ ಸಹೋದರರು, ಅವರ ಪತ್ನಿಯರು ಕೂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫಾತಿಮಾ ನಂದಾವರದಲ್ಲಿ ಫ್ಲಾಟ್ ಖರೀದಿಸಿ ವಾಸವಾಗಿದ್ದರು. ಆರೋಪಿ ಪತಿಯು ಡಿ. 30ರಂದು ಆಕೆಯ ಫ್ಲಾಟ್ಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಕ್ತ ಬರುವಂತೆ ಹೊಡೆದು ಹಲ್ಲೆ ಮಾಡಿ ಹೋಗಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.