- ರಮೇಶ್ ಆಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
- ನ.1ರಂದು ತೀರ್ಥಹಳ್ಳಿಯಲ್ಲಿ ಪೌರ ಸನ್ಮಾನ
ತೀರ್ಥಹಳ್ಳಿ: ತೀರ್ಥಹಳ್ಳಿ ಮಣ್ಣೇ ಅಂತದ್ದು. ಕಲೆ, ಸಾಹಿತ್ಯ, ಸಾಧನೆ, ನವೋದ್ಯಮ..ಹೀಗೆ ಹತ್ತಾರು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ತಾಲೂಕಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಗರಿ ಸೇರಿದೆ.
ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಅವರದು ತೀರ್ಥಹಳ್ಳಿ ತಾಲ್ಲೂಕು ಮುತ್ತೂರು ಹೋಬಳಿ ಕಟ್ಟೆಹಕ್ಕಲು ಬಳಿಯ ಆಲ್ಮನೆ. ಐದನೇ ತರಗತಿ ಓದುವಾಗಲೇ ಯಕ್ಷಗಾನದತ್ತ ವಾಲಿದ್ದರು. ಯಕ್ಷಗಾನ ರಂಗದಲ್ಲಿ 57 ವರ್ಷ ಸೇವೆ ಸಲ್ಲಿಸಿದ್ದಾರೆ. ಧರ್ಮಸ್ಥಳ, ಸುರತ್ಕಲ್, ತೀರ್ಥಹಳ್ಳಿ, ಸೋಮವಾರ ಸಂತೆ ಮೊದಲಾದ ಯಕ್ಷಗಾನ ಮಂಡಳಿಗಳಲ್ಲಿ ಕಲಾವಿದರಾಗಿ, ಪದ್ಯ ರಚನಾಕಾರ, ನಿರ್ದೇಶಕ, ತಾಳಮದ್ದಲೆ ಅರ್ಥದಾರಿಯಾಗಿ ಪಾಂಡಿತ್ಯ ಹೊಂದಿದ್ದಾರೆ. ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯೋತ್ಸವದಂದು ಗೌರವ!: ರಮೇಶ್ ಆಚಾರ್ಯರವರಿಗೆ ನ.1ರಂದು ತೀರ್ಥಹಳ್ಳಿಯಲ್ಲಿ ಅದ್ದೂರಿ ಪೌರ ಸನ್ಮಾನದೊಂದಿಗೆ ಗೌರವಿಸಲು ತಾಲೂಕು ಕಛೇರಿಯಲ್ಲಿ ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನ.1ರಂದು ಬೆಳಿಗ್ಗೆ ಕೊಪ್ಪ ಸರ್ಕಲ್ ನಿಂದ ಯಕ್ಷಗಾನ ಕಲಾವಿದರಿಂದ ಸ್ವಾಗತದೊಂದಿಗೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ವತಿಯಿಂದ ಭವ್ಯ ಮೆರವಣಿಗೆಯಲ್ಲಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಪೌರ ಸನ್ಮಾನ ಮಾಡಿ ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಗಿದೆ. ತಹಶೀಲ್ದಾರ್ ಡಾ. ಶ್ರೀಪಾದ್, ತಾಪಂ ಇಒ ಡಾ.ಆಶಾಲತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಪ್ಪ, ಹಿರಿಯ ಯಕ್ಷಗಾನ ಕಲಾವಿದ ಬಿ. ಗಣಪತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೇಶ್ ಜವಳಿ ಸೇರಿದಂತೆ ಹಲವರು ಇದ್ದರು.