ಹೆಬ್ರಿ ಎಸ್.ಆರ್ ಶಿಕ್ಷಣ ಸಂಸ್ಥೆಯಲ್ಲಿ ಹಬ್ಬದ ಸಂಭ್ರಮ!
– ಆಧುನಿಕ ಇ ಲೈಬ್ರೆರಿ,ನೂತನ ಕಚೇರಿ ಕಟ್ಟಡ ಉದ್ಘಾಟನೆ: ಸಾವಿರಾರು ಜನರ ಸಾಕ್ಷಿ
– ಸಂಸ್ಥೆಯ ಸಾಧನೆ ಬಣ್ಣಿಸಿದ ಮೊಯ್ಲಿ, ಮಧು ಬಂಗಾರಪ್ಪ
NAMMUR EXPRESS NEWS
ಹೆಬ್ರಿ: ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಅತ್ಯಂತ ಸಂಭ್ರಮದಿಂದ ನೆರವೇರಿತು. ಇಡೀ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಬೆಳಕಿನ ಹಾಗೂ ಅಲಂಕಾರದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಆಧುನಿಕ ಇ ಲೈಬ್ರೆರಿ,ನೂತನ ಕಚೇರಿ ಕಟ್ಟಡ ಉದ್ಘಾಟನೆಯಲ್ಲಿ ಹಳೆಯ ವಿದ್ಯಾರ್ಥಿಗಳು ಅವರ ಪೋಷಕರು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು. ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮದಲ್ಲಿ 25 ವರ್ಷಗಳ ಹಿಂದೆ ಸಂಸ್ಥೆಯ ಸ್ಥಾಪನೆಗೆ ಸಹಕರಿಸಿ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಆಧುನಿಕ ಇ ಲೈಬ್ರೆರಿ ಹಾಗೂ ನೂತನ ಕಟ್ಟಡವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಗೆ ಹೇಗಿರಬೇಕು ಎನ್ನುವುದಕ್ಕೆ ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆ ಮಾದರಿಯಾಗಿದೆ. ನಮಗೆ ಶಿಕ್ಷಣವೇ ದೊಡ್ಡ ಆಸ್ತಿಯಾಗಿದೆ ಎಂದರು.
ಸಣ್ಣ ಕೊಠಡಿಯಲ್ಲಿ ಶುರುವಾದ ಶಿಕ್ಷಣ ಸಂಸ್ಥೆ!
ಸಣ್ಣ ಕೊಠಡಿಯಲ್ಲಿ ಆರಂಭಗೊಂಡ ಹೆಬ್ರಿ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆ ಆದರ್ಶ ಶಿಕ್ಷಣವಾಗಿ ಬೆಳೆದಿದೆ. ಸಕಲ ಆಧುನಿಕ ವ್ಯವಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ ರಾಜ್ಯದ ಶಿಕ್ಷಣ ಪ್ರೇಮಿಗಳನ್ನು ಹೆಬ್ರಿಗೆ ಆಕರ್ಷಿಸಿದೆ. ಸಂಸ್ಥಾಪಕರ ಪರಿಕಲ್ಪನೆ ಪ್ರಾಮಾಣಿಕತೆ, ಆತ್ಮವಿಶ್ವಾಸ, ಕಠಿಣ ಪರಿಶ್ರಮವೇ ಈ ಅದ್ಭುತ ಸಾಧನೆಗೆ ಸಾಕ್ಷಿ, ಶಿಕ್ಷಕರು ಸಂಬಳ ಪಡೆಯುವ ನೌಕರರಲ್ಲ, ಅವರೆಲ್ಲರೂ ಮಕ್ಕಳ ಪಾಲಿನ ಮಹಾನ್ ಶಿಲ್ಪಿಗಳು, ಗುರುಗಳು, ಅವರ ತ್ಯಾಗ ಕೂಡ ಸಂಸ್ಥೆಯು ಉನ್ನತವಾಗಿ ಬೆಳೆಯಲು ಮುಖ್ಯ ಕಾರಣವಾಗುತ್ತದೆ. ಎಲ್ಲರೂ ಸಮರ್ಪಣಾಭಾವದಿಂದ ದುಡಿಯುತ್ತಿರುವುದರಿಂದ ಯಶಸ್ಸು ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಬದುಕಿನಲ್ಲಿ ಇಡುವ 2 ಮಹತ್ವದ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ, ಧೈರ್ಯ, ಶ್ರಮ ಮತ್ತು ವಿಶ್ವಾಸ ಇದ್ದಾಗ ಮಾತ್ರ ಎಲ್ಲವನ್ನೂ ಜಯಿಸಿ ಸಾಧಿಸಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಮುಂದಿನ ಮೆಡಿಕಲ್ ಕಾಲೇಜು ಕಟ್ಟುವುದು ಸಹಿತ ಎಲ್ಲಾ ಯೋಜನೆಗಳು ಐಡಿಯಲ್ ಸಂಸ್ಥೆಯಾಗಿ ರೂಪುಗೊಳ್ಳುವ ಭರವಸೆ ನಮಗಿದೆ ಎಂದು ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಸಾಧನೆಗೆ ವೀರಪ್ಪ ಮೊಯಿಲಿ ಅಭಿನಂದಿಸಿದರು. ಉಪನ್ಯಾಸಕ ದೀಪಕ್ ಎನ್ ದುರ್ಗಾ ಸಂಪಾದಕತ್ವದಲ್ಲಿ ಹೊರತಂದ ” ಬೃಂದಾವನ” ವಿಶೇಷ ಸ್ಮರಣಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬಿಡುಗಡೆಗೊಳಿಸಿದರು.
ಸಹಕರಿಸಿದವರಿಗೆ ಸನ್ಮಾನ!
25 ವರ್ಷಗಳ ಹಿಂದೆ ಸಂಸ್ಥೆಯ ಸ್ಥಾಪನೆಗೆ ಸಹಕರಿಸಿ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ಸಂಸ್ಥೆ ಸ್ಥಾಪನೆಗೆ ಸಹಕರಿಸಿದ ಶಾಸಕರಾಗಿದ್ದ ದಿವಂಗತ ಹೆಬ್ರಿ ಗೋಪಾಲ ಭಂಡಾರಿಯವರ ಪತ್ನಿ ಪ್ರಕಾಶಿನಿ ಭಂಡಾರಿ, ಪ್ರಥಮ ವರ್ಷದ ವರ್ಷದ ವಿದ್ಯಾರ್ಥಿಗಳಾದ ಹೆಬ್ರಿಯ ನಿವೇದಿತಾ ಆಚಾರ್ಯ, ಸಚಿನ್ ಶೆಣೈ, ಕಬ್ಬಿನಾಲೆಯ ಡಾ.ಚೇತನ್ ಹೆಬ್ಬಾರ್, ಹೆಬ್ರಿಯ ದಿನಕರ ಪ್ರಭು, ಸಂಸ್ಥೆಯ ಉನ್ನತಿಗೆ ಸಹಕಾರ ನೀಡಿದ ಹಲವರನ್ನು, ವಿವಿಧ ವಿಭಾಗಗಳ ಸಾಧಕ ವಿದ್ಯಾರ್ಥಿಗಳನ್ನು,ಹಳೇ ವಿದ್ಯಾರ್ಥಿಗಳನ್ನು, ಸಚಿವ ಮಧು ಬಂಗಾರಪ್ಪ ಸಹಿತ ಹಲವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸರ್ವರಿಗೂ ಚಿರಋಣಿ : ನಾಗರಾಜ್ ಶೆಟ್ಟಿ
ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಮಾತನಾಡಿ, ನಿರೀಕ್ಷೆಗೂ ಮೀರಿ ನಮ್ಮ ಸಂಸ್ಥೆಯು ಸಾಧನೆ ಮಾಡಿದೆ. ಅದಕ್ಕೆ ನಮ್ಮ ಸಂಸ್ಥೆಯಲ್ಲಿರುವ ಮಕ್ಕಳ ಸಂಖ್ಯೆಯೆ ಸಾಕ್ಷಿ. ಸರ್ವರಿಗೂ ಋಣಿಯಾಗಿದ್ದೇನೆ. ಸರ್ವರ ಸಹಕಾರ ನಮ್ಮ ಮೇಲಿರಲಿ ಎಂದು ಕೃತಜ್ಞತೆ ಸಲ್ಲಿಸಿದರು. ಸೀತಾನದಿ ವಿಠಲ ಶೆಟ್ಟಿ ಸಂಸ್ಥೆಯ ಸಾಧನೆಯ ಬಗೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕರಾವಳಿ – ಮಲೆನಾಡು ಗಣ್ಯರ ಸಮಾಗಮ!
ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಎಸ್.ಎಲ್.ಭೋಜೆ ಗೌಡ, ಹೆಬ್ರಿ ಪ್ರಕಾಶಿನಿ ಗೋಪಾಲ ಭಂಡಾರಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್ ಎಂ.ಮಂಜುನಾಥ ಗೌಡ, ಲೆಕ್ಕಪರಿಶೋಧಕ ಉಡುಪಿಯ ಗಣೇಶ್ ಹೆಬ್ಬಾರ್, ಸಾಧಕ ವಿದ್ಯಾರ್ಥಿ ಡಾ.ಚೇತನ್ ಹೆಬ್ಬಾರ್, ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ಯತಿರಾಜ್ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ, ಆಡಳಿತಾಧಿಕಾರಿ ಹೆರಾಲ್ಡ್ ಲೂಯಿಸ್, ಪ್ರಾಂಶುಪಾಲ ಪ್ರಶಾಂತ್ ಎಚ್, ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ, ಪ್ರಾಂಶುಪಾಲೆ ಭಗವತಿ ಸಹಿತ ಗಣ್ಯರು, ಅಧಿಕಾರಿಗಳು, ಪೋಷಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ನಿಶಿತಾ ನಿರೂಪಿಸಿ ಭಗವತಿ ವಂದಿಸಿದರು. ಸಪ್ನಾ ಎನ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.