– ಕುಂದಾಪುರ: ಶ್ರೀ ವಿನಾಯಕ ದೇವಾಲಯ ಆನೆಗುಡ್ಡೆಯಲ್ಲಿ ಕಳ್ಳತನ !
– ಕಾಸರಗೋಡು : ಶಾಲಾ ವಾಹನ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ, ಆರು ಮಂದಿಗೆ ಗಾಯ!
– ನಾಪತ್ತೆಯಾದ ಹೆಡ್ ಕಾನ್ಸ್ಟೇಬಲ್!
– ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದ ಚಿನ್ನ ವಶ!
NAMMUR EXPRESS NEWS
ಕುಂದಾಪುರ : ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯ ಚಿನ್ನಾಭರಣದ ಪರ್ಸ್ ಕಳವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳದ ನಾರಾಯಣ ಎಂಬವರು ಮದುವೆಯ ಪ್ರಯುಕ್ತ 51,900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿಸಿದರು. ಇವುಗಳನ್ನು ಪರ್ಸಿನಲ್ಲಿ ತುಂಬಿಸಿ ಪತ್ನಿಯ ವ್ಯಾನಿಟಿ ಬ್ಯಾಗಿನಲ್ಲಿಟ್ಟು ಡಿ.27 ರಂದು ಅನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಹೋಗಿದ್ದರು. ಮಧ್ಯಾಹ್ನದ ವೇಳೆ ದೇವಸ್ಥಾನದ ಹೊರಗೆ ಬಂದು ನೋಡಿದಾಗ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಇಟ್ಟಿದ್ದ ಪರ್ಸ್ ಕಳವಾಗಿರುವುದು ಕಂಡು ಬಂತು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಾಲಾ ವಾಹನ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ , ಅರು ಮಂದಿಗೆ ಗಾಯ!
ಕಾಸರಗೋಡು: ಶಾಲಾ ವಾಹನ ಹಾಗೂ ಆಂಬ್ಯುಲೆನ್ಸ್ ನಡುವೆ ಉಂಟಾದ ಅಪಘಾತದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮೃತ ಪಟ್ಟು ಐವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯದಲ್ಲಿ ನಡೆದಿದೆ ಕಣ್ಣೂರಿನ ಸುರೇಶ್ ಕುಮಾರ್ ಮೃತ ಪಟ್ಟವರು. ಶಿರಿಯದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಮತ್ತು ಕಣ್ಣೂರಿನಿಂದ ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದಾಗ ಅಪಘಾತ ನಡೆದಿದೆ. ಇನ್ನು ಗಾಯಗೊಂಡ ವಿದ್ಯಾರ್ಥಿಗಳನ್ನು ಕುಂಬಳೆ ಮತ್ತು ಬಂದ್ಯೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಮಂಗಳೂರಿಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು: ನಾಪತ್ತೆಯಾದ ಹೆಡ್ ಕಾನ್ಸ್ಟೇಬಲ್
ಮಂಗಳೂರು: ಸುಮಾರು 15 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಹೆಗ್ಡೆ (41) ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಮಂಜುನಾಥ ಹೆಗ್ಡೆ ಅವರನ್ನು ಮಂಗಳೂರು ನಗರ ಸಿಸಿಆರ್ಬಿ ಘಟಕಕ್ಕೆ ಒಒಡಿ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಅಲ್ಲಿ ಕೆಲಸಕ್ಕೆ ವರದಿ ಮಾಡುವುದಾಗಿ ಹೇಳಿ ಜ.13ರಂದು ಮನೆಯಿಂದ ಹೋಗಿದ್ದರು. ಆ ದಿನ ಮಧ್ಯಾಹ್ನ 1 ಗಂಟೆಗೆ ಮನೆಮಂದಿ ಮಂಜುನಾಥ್ರ ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.
ಸ್ನೇಹಿತರಲ್ಲಿ, ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 5.6 ಅಡಿ ಎತ್ತರದ, ಗೋಧಿ ಮೈ ಬಣ್ಣದ, ದುಂಡು ಮುಖದ, ಸಪೂರ ಶರೀರದ, ಬಿಳಿ ಹಾಗೂ ಕ್ರೀಂ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದ ಚಿನ್ನ ವಶ
ಮಂಗಳೂರು: ಅಬುಧಾಬಿ ಮತ್ತು ದುಬೈನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದಿದ್ದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 50.93 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜನವರಿ 12ರಂದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಪ್ರಯಾಣಿಕರು ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಮತ್ತು ಚೆಕ್ಇನ್ ಬ್ಯಾಗೇಜ್ನಲ್ಲಿ ಚಾಕೊಲೇಟ್ ಬಾಕ್ಸ್ಗಳಲ್ಲಿ ಬಚ್ಚಿಟ್ಟು ಚಿನ್ನವನ್ನು ಕಳ್ಳ ಸಾಗಾಟ ಮಾಡಲು ಯತ್ನಿಸಿದ್ದರು. 815 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಅಂದಾಜು ಮೌಲ್ಯ 50,93,750 ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.