- ಪುತ್ತೂರಿನಲ್ಲಿ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ
ಪುತ್ತೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ರೆಸಪ್ಷನಿಸ್ಟ್ ಆಗಿದ್ದ ಯುವತಿಗೆ ತನ್ನ ಮಾಜಿ ಪ್ರಿಯಕರ ಕಿರುಕುಳ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.
ವಿವಾಹಿತ ಹಾಗೂ ಮಾಜಿ ಪ್ರಿಯಕರ ದೇವಿಕಿರಣ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆಯಿಂದ ಮನನೊಂದು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಮಧುಶ್ರೀ (26) ಎಂಬ ಅವಿವಾಹಿತ ಯುವತಿಯೊಬ್ಬಳು ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿದೆ.
ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಮಧುಶ್ರೀ ಕಳೆದ ನಾಲ್ಕು ವರ್ಷದಿಂದ ಖಾಸಗಿ ಅಸ್ಪತ್ರೆಯೊಂದರಲ್ಲಿ ದುಡಿಯುತ್ತಿದ್ದು, ರಾತ್ರಿ ಆಸ್ಪತ್ರೆಯ ಹಾಸ್ಟೆಲ್ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದು ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ಮಧುಶ್ರೀ ಆತ್ಮಹತ್ಯೆಗೆ ದೇವಿಕಿರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀಯವರ ಮಾವ ವಿಠಲ್ ಗೌಡ ಅವರು ಸಂಪ್ಯ ಪೊಲೀಸ್ ರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.