ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ಧತೆ
– ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಚೂರ್ಣೋತ್ಸವ!
ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಪರ್ಯಾಯ ಉಪಾಯ
– ಟ್ರಾಫಿಕ್ ಮ್ಯಾನೇಜ್ಮೆಂಟ್ ಪೋರ್ಟಲ್ ನಲ್ಲಿ ಮಾಹಿತಿ ಲಭ್ಯ!
NAMMUR EXPRESS NEWS
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಾರ್ಷಿಕವಾಗಿ ಸಪ್ತೋತ್ಸವದ ಮರುದಿನ ನಡೆಯುವ ಚೂರ್ಣೋತ್ಸವ ಹಾಗೂ ಅವನೃಥ ಸ್ನಾನ ಸೋಮವಾರ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಿತು. ಉತ್ಸವದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದ ವರ್ಧನತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ಬ್ರಹ್ಮರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಪರ್ಯಾಯ ಶ್ರೀಪಾದರು ಮಧ್ವಮಂಟಪದಲ್ಲಿ ತೊಟ್ಟಿಲು ಪೂಜೆ ನೆರವೇರಿಸಿ ಅಷ್ಟ ಮಠಾಧೀಶರನ್ನು ಗೌರವಿಸಿದರು. ಅನಂತರ ಮಧ್ವ ಸರೋವರದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳಿಗೆ ಅವನೃಥ ಸ್ನಾನ ನಡೆಯಿತು. ಭಾರೀ ಜನಸಂದಣಿ ಇದ್ದು ಮಧ್ಯಾಹ್ನ ಸಾವಿರಾರು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಕೃಷ್ಣಾಪುರ ಮಠ ಪರ್ಯಾಯದ ಕೊನೆಯ ಉತ್ಸವ ಇದಾಗಿದ್ದು ಗುರುವಾರ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ ಉತ್ಸವ ನಡೆಯಲಿದೆ.
ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಪರ್ಯಾಯ ಉಪಾಯ
– ಟ್ರಾಫಿಕ್ ಮ್ಯಾನೇಜ್ಮೆಂಟ್ ಪೋರ್ಟಲ್ ನಲ್ಲಿ ಮಾಹಿತಿ ಲಭ್ಯ!
ಟ್ರಾಫಿಕ್ ಸಂಬಂಧಿತ ವಿವಿಧ ಸಮಸ್ಯೆಗಳಿಗೆ ಪ್ರವಾಸಿಗರ ಸಹಾಯಕ್ಕಾಗಿ ಉಡುಪಿ ಜಿಲ್ಲಾ ಪೊಲೀಸರು 2024ರ ಪರ್ಯಾಯದ ಅಂಗವಾಗಿ ವಿಶೇಷವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ. ಪರ್ಯಾಯದ ಹಿನ್ನಲೆ ನಗರದಲ್ಲಿ ಸಂಚಾರ ನಿರ್ವಹಣೆಯ ಮಾರ್ಗದಲ್ಲಿ ಬದಲಾವಣೆ ಇರುವುದರಿಂದ, ಗೂಗಲ್ ನಕ್ಷೆಗಳಲ್ಲಿ ರಚಿಸಲಾದ ಈ ಟ್ರಾಫಿಕ್ ಮ್ಯಾನೇಜ್ಮೆಂಟ್ ಪೋರ್ಟಲ್ ಪ್ರವಾಸಿಗರಿಗೆ ತುಂಬಾ ಸಹಾಯಕವಾಗಲಿದೆ. ಈ ವ್ಯವಸ್ಥೆಯು ಕಾರುಗಳು, ಬಸ್ಸುಗಳು, ಮೋಟಾರು ಸೈಕಲ್ಗಳು, ದ್ವಿಚಕ್ರ ವಾಹನಗಳು ಮತ್ತು ವಾಹನಗಳ ಇತರ ವಿಧಾನಗಳಿಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿದೆ.
ಸಾರ್ವಜನಿಕರು ತಮ್ಮ ಅವಶ್ಯಕತೆಗಳ ಆಧಾರದ ಮೇಲೆ ತಮ್ಮ ಪಾರ್ಕಿಂಗ್ ಸ್ಥಳಗಳನ್ನು ಆಯ್ಕೆ ಮಾಡಬಹುದು ಇದರಲ್ಲಿ ಪರ್ಯಾಯ ಮಾರ್ಗ, ಪೊಲೀಸ್ ಸಹಾಯವಾಣಿ ಬೂತ್ಗಳ ಸ್ಥಳಗಳು, ಆಸ್ಪತ್ರೆಗಳು, ಮೊಬೈಲ್ ಶೌಚಾಲಯಗಳು, ವಿಐಪಿ ಪಾರ್ಕಿಂಗ್ಗಳು, ಬ್ಯಾರಿಕೇಡ್ಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಸಹ ಹೊಂದಿದೆ. ಸಾರ್ವಜನಿಕರು ಈ ಕೆಳಗಿನ ಲಿಂಕ್ ಮೂಲಕ ಸಂಚಾರ ನಿರ್ವಹಣಾ ವ್ಯವಸ್ಥೆಗೆ ಲಾಗ್ ಇನ್ ಮಾಡಬಹುದು: https://goo.gl/maps/PmJ1Ee5cBKPrVbHK6