- ಮುನಿರತ್ನ ಪರ ದರ್ಶನ್ ರೋಡ್ ಶೋ
- ಜನವೋ ಜನ: ಭಾರೀ ಬಂದೋಬಸ್ತ್!
ಬೆಂಗಳೂರು: ಬೆಂಗಳೂರು ನಗರದ ಆರ್.ಆರ್.ನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾತ್ರಿವರೆಗೆ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಪ್ರಚಾರ ಮಾಡಿದ್ದಾರೆ.
ಯಶವಂತಪುರದಿಂದ ರೋಡ್ ಶೋ ನಡೆಸುತ್ತಿರುವ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸ್ ರು ಹರಸಾಹಸ ಪಡುತ್ತಿದ್ದಾರೆ.
ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕರೋನಾ ಸಮಯದಲ್ಲಿ ಮುನಿರತ್ನ ಅವರು ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಅವರು ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
ನಾನು ಯಾವುದೇ ಪಕ್ಷವನ್ನು ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿದ್ದೇನೆ. ಮುನಿರತ್ನ ಸೇವೆಯನ್ನು ಗಮನದಲ್ಲಿಟ್ಟುಕೊಂಡು ನಾನು ಮುನಿರತ್ನ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಜಕಾರಣಿಯಲ್ಲದೆ ನಿರ್ಮಾಪಕರೂ ಆಗಿರುವ ಮುನಿರತ್ನ ಅವರ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಹೀರೋ ಆಗಿ ನಟಿಸಿದ್ದರು.
ಭಾರೀ ಬಂದೋಬಸ್ತ್!: ಉತ್ತರ ವಿಭಾಗ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಒಬ್ಬರು ಡಿಸಿಪಿ, 3 ಜನ ಎಸಿಪಿ, 5 ಜನ ಇನ್? ಸ್ಪೆಕ್ಟರ್, 15 ಜನ ಸಬ್ ಇನ್ಸ್ಸ್ಪೆಕ್ಟರ್, 50 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2 ಕೆಎಸ್ ಆರ್ ಪಿ ತುಕಡಿ, 1 ಸಿಎಆರ್ಪಿ ತುಕಡಿ ಕೂಡ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ಘೋಷಿಸಲಾಗಿದೆ. ಐಎಎಸ್ ಅಧಿಕಾರಿ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ.