ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆ: ಇಡೀ ಭಾರತ ಸಜ್ಜು!
– ಕೇಸರಿ ಧ್ವಜ, ಶಾಲು, ರಾಮನ ಫೋಟೋ, ಪುಸ್ತಕಗಳಿಗೆ ಬಾರಿ ಬೇಡಿಕೆ
– ಮಂದಿರಗಳಲ್ಲಿ ಮಾತ್ರವಲ್ಲ ಮಾಲ್ಗಳಲ್ಲೂ ಸಿದ್ಧತೆ
NAMMUR EXPRESS NEWS
ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ರಾಮ ಮಂದಿರದ ಲೋಕಾರ್ಪಣೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಹಳ್ಳಿ ಹಳ್ಳಿ, ಮನೆ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಪ್ರತಿ ದೇಗುಲದಲ್ಲೂ ವಿಶೇಷ ಪೂಜೆ, ಊಟ, ಎಲ್ ಇ ಡಿ ಪರದೆಗಳು ಸಿದ್ಧವಾಗುತ್ತಿವೆ. ಬ್ಯಾನರ್ ಹಾಕಲಾಗಿದೆ. ಕರ್ನಾಟಕ ಸೇರಿ ದೇಶಾದ್ಯಂತ ಅಂದು ಭಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಡುವೆ ಜನರು ರಾಮೋತ್ಸವಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೇಸರಿ ಧ್ವಜಗಳು , ರಾಮಾಯಣ ಪುಸ್ತಕಗಳು, ರಾಮ ಮಂದಿರದ ಮಾದರಿಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಹಿರಿಯರು ಮಕ್ಕಳಿಗೆ ರಾಮಾಯಣದ ಬಗ್ಗೆ ಕಥೆಗಳನ್ನು ಹೇಳುತ್ತಿದ್ದಾರೆ, ಮಕ್ಕಳೂ ಅವುಗಳನ್ನು ಓದುವ ಉತ್ಸಾಹ ಹೊಂದಿದ್ದಾರೆ. ಹೀಗಾಗಿ ಪುಸ್ತಕಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬಂದಿದೆ.
ಧ್ವಜ, ಶಾಲು, ಮೂರ್ತಿಗಳಿಗೆ ಬೇಡಿಕೆ
ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೇಸರಿ ಧ್ವಜಗಳಿಗೆ ವಿಪರೀತ ಬೇಡಿಕೆ ಇದೆ. ಅದರಲ್ಲೂ ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಎಂದು ಬರೆದ ಕೇಸರಿ ಧ್ವಜಗಳನ್ನೇ ಹೆಚ್ಚು ಹೆಚ್ಚು ಕೇಳುತ್ತಿದ್ದಾರೆ. ಇನ್ನು ಕೇಸರಿ ಶಾಲು, ಅದರಲ್ಲೂ ಜೈಶ್ರೀರಾಮ್ ಎಂದು ಪ್ರಿಂಟ್ ಮಾಡಿದ ಶಾಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯ ಭಾವಚಿತ್ರ ಮತ್ತು ಮೂರ್ತಿಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬರುತ್ತಿದೆ.
ಮಂದಿರಗಳಲ್ಲಿ ಮಾತ್ರವಲ್ಲ ಮಾಲ್ಗಳಲ್ಲೂ ಸಿದ್ಧತೆ
ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಅಂದು ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರ ಜತೆಗೇ ಶಾಪಿಂಗ್ ಮಾಲ್ಗಳಲ್ಲೂ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ.
ಪಕ್ಷ, ಜಾತಿ, ಧರ್ಮ ಬಿಟ್ಟು ಆಚರಣೆ
ರಾಜ್ಯದ ಎಲ್ಲೆಡೆ ಪಕ್ಷ, ಜಾತಿ, ಧರ್ಮ ಬಿಟ್ಟು ರಾಮನ ಉತ್ಸವಕ್ಕೆ ಜನ ಸಜ್ಜುಗೊಂಡಿದ್ದಾರೆ. ಈಗಾಗಲೇ ಎಲ್ಲೆಡೆ ಆಚರಣೆ ಶುರುವಾಗಿದೆ.