– ಮಹಿಳೆ ನೇಣುಬಿಗಿದು ಆತ್ಮಹತ್ಯೆ!
– ಕಾಲೇಜು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ;
ಇನ್ಸ್ಪೆಕ್ಟರ್ ಅಮಾನತು!
– ಕರ್ತವ್ಯ ನಿರತ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ!
– ಕೆಲಸಗಾರರನ್ನು ಬಲವಂತಾಗಿ ಕೂಡಿ ಹಾಕಿದ ಕಾಂಪ್ಲೆಕ್ಸ್ ಮಾಲೀಕ!
– ಬಸ್ ಚಾಲಕನ ಮೇಲೆ ಹಲ್ಲೆ; ಎರಡು ವರ್ಷಗಳ ಗಲಾಟೆ!
NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿ ಸಮೀಪದ ಕುಬಲಾಜೆಯ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉದ್ಯಮಿ ಸುನಿಲ್ ಅವರ ಪತ್ನಿ ಅಳದಂಗಡಿ ಸನಿಹದ ಕುಬಲಾಜೆ ಮನೆ ನಿವಾಸಿ ಕಾವ್ಯಾ(32) ನೇಣಿಗೆ ಶರಣಾದ ಗೃಹಿಣಿ. ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.18 ರ ಮಧ್ಯಾಹ್ನ ನಡೆದಿದೆ. ತನ್ನ ಮನೆಯ ಕೋಣೆಯಲ್ಲಿನ ತೊಟ್ಟಿಲು ಕಟ್ಟುವ ಹುಕ್ಸ್ ಗೆ ಚೂಡಿದಾರದ ವೇಲನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ!
ಮಂಗಳೂರು: ನಗರದ ಕದ್ರಿ ಪಾರ್ಕ್ ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಯುವಕರ ತಂಡವೊಂದು ಇಂದು ಬೆಳಗ್ಗೆ ನೈತಿಕ ಪೊಲೀಸ್ ಗಿರಿ ನಡೆಸಿದೆ. ಆದರೆ ಕದ್ರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳಾದ ಬಂಟ್ವಾಳ ನಿವಾಸಿಗಳಾದ ನಿತಿನ್, ಹರ್ಷ ಸೇರಿದಂತೆ ಪೆರ್ಮುದೆಯ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತೂರಿನ ಖಾಸಗಿ ಕಾಲೇಜಿನಲ್ಲಿ ಜರ್ನಲಿಸಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಖಿಲ್ ಚಾಕೋ ಹಾಗೂ ದೇರಳಕಟ್ಟೆಯ ಕಾಲೇಜೊಂದರಲ್ಲಿ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಇಂದು ಬೆಳಗ್ಗೆ ದೇರಳಕಟ್ಟೆಯಿಂದ ಈ ಜೋಡಿ ಬಸ್ ನಲ್ಲಿ ಆಗಮಿಸಿ ಜ್ಯೋತಿಯಲ್ಲಿ ಇಳಿದಿದೆ.
ಬಸ್ ನಲ್ಲಿದ್ದಾಗಲೇ ಹಿಂಬಾಲಿಸಿಕೊಂಡು ಬಂದ ಐದಾರು ಮಂದಿಯ ಯುವಕರ ತಂಡ ಇವರು ಕದ್ರಿ ಪಾರ್ಕ್ ಗೆ ಬರುತ್ತಿದ್ದ ವೇಳೆ ಪಾರ್ಕ್ ರಸ್ತೆಯಲ್ಲೇ ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ಜೋಡಿಯನ್ನು ತಡೆದು ವಿಚಾರಿಸಿದ ಯುವಕರ ತಂಡ ಹಲ್ಲೆಗೆತ್ನಿಸಿದೆ. ಈ ವೇಳೆ ಜೋಡಿ ರಿಕ್ಷಾದಲ್ಲಿ ಹೋಗಲು ಯತ್ನಿಸಿದಾಗ ಮತ್ತೆ ತಂಡ ಅವರನ್ನು ಎಳೆದಾಡಿದೆ. ಆಗ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಠಾಣಾ ಇನ್ ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ತಂಡ ಘಟನೆ ನಡೆದ ಐದೇ ನಿಮಿಷಕ್ಕೆ ಸ್ಥಳಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳಿಬ್ಬರನ್ನು ರಕ್ಷಿಸಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ತಂಡದಲ್ಲಿ ಮತ್ತೋರ್ವ ಅಪ್ರಾಪ್ತ ಬಾಲಕನಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಪೆಕ್ಟರ್ ಅಮಾನತು!
ಮಂಗಳೂರು : ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದೆ, ಈ ಕುರಿತು ಮೇಲಧಿಕಾರಿಗಳು ನೀಡಿದ ಆದೇಶವನ್ನು ಸಹ ಉಲ್ಲಂಘಿಸಿದ ಆರೋಪ ಹೊತ್ತಿದ್ದ ಮಂಗಳೂರಿನ ಕಂಕನಾಡಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ಅವರನ್ನು ಕರ್ತವ್ಯದಿಂದ ಅಮಾನತಿನಲ್ಲಿರಿಸಲಾಗಿದೆ. ಭಜಂತ್ರಿ ವಿರುದ್ಧ ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆಯ ವರ್ತನೆ, ಅಕ್ರಮ ಮರಳುಗಾರಿಕೆಯೊಂದಿಗೆ ಶಾಮೀಲು, ಸ್ಥಳೀಯರಿಗೆ ಕಿರಿಕಿರಿ ಮುಂತಾದ ಆರೋಪಗಳಿದ್ದವು. ಪೊಲೀಸ್ ಕಮಿಷನರ್ ಅಮಾನತು ಆದೇಶ ಹೊರಡಿಸಿದ್ದಾರೆ.
ನಗರದ ಜೆಪ್ಪಿನ ಮೊಗರು ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ದಾಳಿ ನಡೆಸಲು ಎಸಿಪಿ ಧನ್ಯಾ ನಾಯಕ್ ಅವರು ಇನ್ಸ್ಪೆಕ್ಟರ್ ಭಜಂತ್ರಿಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಜರಗಿಸದೆ ನಿರ್ಲಕ್ಷಿಸಿದ್ದಲ್ಲದೆ ಮೇಲಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದರು ಎಂದು ಎಸಿಪಿ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು. ಅಲ್ಲದೆ ಭಜಂತ್ರಿಯವರು ತಮ್ಮ ಅಪಾರ್ಟ್ಮೆಂಟ್ನ ಇತರ ನಿವಾಸಿಗಳಿಗೆ ಕಿರಿಕಿರಿ ಆಗುವಂತೆ ವರ್ತಿಸುತ್ತಿದ್ದರು. ಮರಳು ಮಾಫಿಯಾದೊಂದಿಗೆ ಶಾಮೀಲು, ಹಿರಿಯ ಅಧಿಕಾರಿಗಳ ಆದೇಶ ನಿರ್ಲಕ್ಷ್ಯ ದೂರುದಾರರ ನಿರ್ಲಕ್ಷ್ಯ, ಅಪಾರ್ಟ್ಮೆಂಟ್ನ ಸಹವರ್ತಿಗಳೊಂದಿಗೆ ಅಗೌರವದಿಂದ ವರ್ತಿಸಿರುವ ಬಗ್ಗೆ ಖುದ್ದು ಎಸಿಪಿ ಧನ್ಯಾ ನಾಯಕ್ ಅವರೇ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು.
ಈ ಕುರಿತಂತೆ ಪೊಲೀಸ್ ಕಮಿಷನರ್ ವಿವರಣೆ ಕೇಳಿದಾಗಲೂ ಅವರೊಂದಿಗೂ ಭಜಂತ್ರಿಯವರು ಉಡಾಫೆಯಿಂದ ವರ್ತಿಸಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಮಿಷನರ್ ಅನುಪಮ್ ಅಗ್ರವಾಲ್ ಭಜಂತ್ರಿಯವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕರ್ತವ್ಯ ನಿರತ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ!
ಬೆಳ್ತಂಗಡಿ: ಸರಕಾರಿ ಕರ್ತವ್ಯದ ವೇಳೆ ಅಡ್ಡಿಪಡಿಸಿದ್ದಲ್ಲದೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸಗಾರರನ್ನು ಬಲವಂತಾಗಿ ಕೂಡಿ ಹಾಕಿದ ಕಾಂಪ್ಲೆಕ್ಸ್ ಮಾಲೀಕ ಪ್ರಕರಣ
ಮಂಗಳೂರು : ಕೆಲಸಗಾರರನ್ನು ಕಾಂಪ್ಲೆಕ್ಸ್ ನಲ್ಲಿ ಬಲವಂತವಾಗಿ ಕೂಡಿ ಹಾಕಿರುವ ಘಟನೆ ನಗರದ ಕಾಶಿಯಾ ಜಂಕ್ಷನ್ನ ಶಾಮಾ ಕಾಂಪ್ಲೆಕ್ಸ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಮಹಮ್ಮದ್ ಸವೂದ್, ನಿಶಾಮ್, ಸವಾದ್ ಮತ್ತು ಕಾಜೋಲ್ ಎಂಬವರು ಶಾಮಾ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿರುವ ಮಳಿಗೆಯ ಸ್ಟೋರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 8.30ರ ವೇಳೆಗೆ ನೆಲಮಹಡಿಗೆ ಬಂದಾಗ ಕಾಂಪ್ಲೆಕ್ಸ್ ನ ಮಾಲೀಕ ಅಸ್ಲಾಮ್ ಎಂಬಾತ ನೆಲಮಹಡಿಯ ಷಟರ್ ಬಾಗಿಲು ಹಾಕಿ ಬಲವಂತವಾಗಿ ಕೂಡಿ ಹಾಕಿದ್ದಲ್ಲದೆ, ಸಂತ್ರಸ್ತರನ್ನು ತಡೆದು ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಹಮ್ಮದ್ ಸವೂದ್ ಎಂಬವರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತರನ್ನು ರಕ್ಷಿಸಿ ಆರೋಪಿ ಅಸ್ಲಾಮ್ ವಿರುದ್ಧ ಐಪಿಸಿ ಸೆಕ್ಷನ್ 341, 504ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಸ್ ಚಾಲಕನ ಮೇಲೆ ಹಲ್ಲೆ; ಎರಡು ವರ್ಷಗಳ ಗಲಾಟೆ!
ಜೆಎಮ್ಟಿ ಬಸ್ ಚಾಲಕರಾದ ಸಂತೋಷ ಹಾಗೂ ಶಿಶರ್ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಟಿಮ್ ಬಸ್ನ ಮ್ಯಾನೇಜರ್ ಹಾಗೂ ಚಾಲಕ ಬುರನ್ ಮತ್ತು ಚಾಲಕ ಸುದೀಪ್ ಅಡ್ಡಗಟ್ಟಿ ಚೂರಿ ಇರಿದ್ದರು. ಪರ್ಯಾಯ ದಿನದಂದು ಉಡುಪಿ ಸಿಟಿ ಬಸ್ ಚಾಲಕರ ನಡುವೆ ಗಲಾಟೆ ನಡೆದಿತ್ತು. ಇದರ ವಿಚಾರವಾಗಿ ನಗರ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಸಿ ಕಳುಹಿಸಲಾಗಿದೆ. ಬಳಿಕ ರಾತ್ರಿ ಮೂವರಿದ್ದ ತಂಡವು ಈ ಕೃತ್ಯ ಎಸಗಿದ್ದು ಗಾಯಾಳು ಬಸ್ ಚಾಲಕರು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಶಿರ್ ಮೇಲೆ ಸುದೀಪ್ ನೇತೃತ್ವದ ಎಂಟು ಜನರಿದ್ದ ತಂಡವೊಂದು ಕಳೆದ ಎರಡು ವರ್ಷಗಳ ಹಿಂದೆ ಸಿಟಿಬಸ್ ನಿಲ್ದಾಣದ ಬಳಿ ಹಲ್ಲೆ ನಡೆಸಿತ್ತು. ಬಸ್ ನಿಲ್ದಾಣದಲ್ಲಿ ಎರಡು ಬಸ್ ಗಳ ಮಾಲಿಕ, ಚಾಲಕರ ನಡುವೆ ಯಾವಾಗಲೂ ಜಗಳ ನಡೆಯುತ್ತಿದೆ, ಪ್ರಯಾಣಿಕರಿಗೆ ತೊಂದರೆ ಉಂಟಾಗಿರುವ ಕಾರಣ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.