- ದೇಗುಲದ ವ್ಯವಹಾರಕ್ಕೆ ಡೀಸಿ ಹೊಣೆ
- ಕಂಟಕ ಮಾಡುತ್ತೆ ಸರ್ಕಾರ: ರಾಮಪ್ಪ
- ಈಡಿಗ ಸಮುದಾಯ ಹೋರಾಟಕ್ಕೆ ಇಳಿಯುತ್ತಾ?
ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ವಿವಾದದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯ ಮೊದಲ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಈ ಸಭೆ ಭಾರೀ ಕುತೂಹಲ ಮೂಡಿಸಿದೆ. ಅಚ್ಚರಿಯೆಂದರೆ ಈ ಸಭೆಯಿಂದ ಮಾಧ್ಯಮದವರನ್ನು ಹೊರಗೆ ಇಟ್ಟು ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿಗಂದೂರು ದೇವಾಲಯದ ಹಣದ ವ್ಯವಹಾರವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಇದ್ದ ಗೊಂದಲ ನಿವಾರಣೆ ಮಾಡಿ, ಪಾರದರ್ಶಕ ಆಡಳಿತ ನಡೆಸಲು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಭೆಯ ಬಳಿಕ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ದೇವಾಲಯದಲ್ಲಿ ಹಿಂದೆ ಯಾವ ರೀತಿ ಪೂಜೆ ಕಾರ್ಯಗಳು, ಸೇವೆಗಳು ನಡೆಯುತ್ತಿತ್ತೋ, ಮುಂದೆಯೂ ಸಹ ಹಾಗೆ ಮುಂದುವರೆಯಲಿದೆ. ಆದರೆ, ಇನ್ಮುಂದೆ ದೇವಾಲಯಕ್ಕೆ ಬರುವ ಹರಕೆ ಸೇರಿದಂತೆ ಎಲ್ಲದಕ್ಕೂ ರಶೀದಿ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಒಬ್ಬರನ್ನು ನೇಮಕ ಮಾಡಲಿದ್ದಾರೆ ಎಂದರು. ಈ ಹಿಂದೆ ಇದ್ದ ಟ್ರಸ್ಟ್ ಹಾಗೆಯೆ ಇರಲಿದೆ. ಈಗ ಹೊಸ ಸಮಿತಿ ರಚನೆ ಮಾಡಿ ಅದರ ಮೂಲಕ ದೇವಾಲಯದ ಉಸ್ತುವಾರಿ ಮಾಡಲಾಗುವುದು. ಸದ್ಯ ಈಗ ದೇವಾಲಯದಲ್ಲಿ ಇರುವ ನೌಕರರನ್ನೇ ಬಳಸಿಕೊಂಡು ದೇವತಾ ಕಾರ್ಯ ನಡೆಸಲಾಗುವುದು ಎಂದರು.
ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ಟರನ್ನು ಬಳಸಿಕೊಂಡೇ ದೇವಾಲಯದ ಆಡಳಿತ, ಪೂಜೆ ನಡೆಯಲಿದೆ. ಇನ್ನು ಮುಂದೆ ಪ್ರತೀ ತಿಂಗಳು ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿ ಸಭೆ ನಡೆಯುತ್ತದೆ. ಇವೆಲ್ಲವೂ ತಾತ್ಕಾಲಿಕವಾಗಿ ಇರಲಿದೆ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡುವುದು ಮುಗಿದು ಹೋದ ಅಧ್ಯಾಯ. ದೇವಾಲಯದ ಭೂಮಿ ಒತ್ತುವರಿ ಮಾಡಿದ್ದರ ಬಗ್ಗೆ ಗಮನ ಹರಿಸಲಾಗುವುದು. ಮುಂದಿನ ಸಭೆ ಶಿವಮೊಗ್ಗ, ಸಾಗರ, ದೇವಾಲಯ ಸೇರಿದಂತೆ ಎಲ್ಲಿ ಬೇಕಾದರೂ ಸಹ ನಡೆಯಬಹುದು ಎಂದರು. ಸಂಸದ ಬಿ.ವೈ.ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಡಿಸಿ ಕೆ.ಬಿ.ಶಿವಕುಮಾರ, ದೇವಾಲಯದ ಧರ್ಮದರ್ಶಿ ರಾಮಪ್ಪ, ಅರ್ಚಕ ಶೇಷಗಿರಿ ಭಟ್ಟ, ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಸೇರಿ ಇತರರು ಹಾಜರಿದ್ದರು.
ರಾಮಪ್ಪ ಹೇಳಿದ್ದೇನು?: ಖಾಸಗಿ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಭಾಷಣ ಮಾಡಿದ ರಾಮಪ್ಪ ಅವರು, ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಯಾವ ಭ್ರಷ್ಟಾಚಾರಗಳು ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ ರಚನೆ ಮಾಡುವ ಮೂಲಕ ಏನೋ ಕಂಟಕ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಮಾಡಿರುವ ಸಮಿತಿಯನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದ ರಾಮಪ್ಪ ಅವರು ವೇದಿಕೆಯಲ್ಲಿದ್ದ ಆರ್ಯ ಈಡಿಗ ಮಠದ ಶ್ರೀರೇಣುಕಾನಂದ ಶ್ರೀಗಳು ಮತ್ತು ಸಮುದಾಯ ಹೋರಾಟ ನಡೆಸಬೇಕು. ಅದಕ್ಕೆ ನಾನು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇನೆ ಎಂದರು.