ರೈತರ ಕೃಷಿ ಸಾಲದ ಬಡ್ಡಿ ಮನ್ನಾ: ಯಾರಿಗೆ ಲಾಭ?
– ಯಾವ ಸಾಲದ ಬಡ್ಡಿ ಮನ್ನಾ?: ಏನಿದು ಯೋಜನೆ
– ಫೆ.29ರೊಳಗೆ ಸಾಲದ ಅಸಲು ಕಟ್ಟಿದರೆ ಮಾತ್ರ ಬಡ್ಡಿ ಮನ್ನಾ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಕೃಷಿ ಸಾಲದ ಮೇಲೆ ಬಡ್ಡಿ ಮನ್ನಾ ಮಾಡುವ ಮೂಲಕ ಮಹತ್ವದ ಆದೇಶ ಪ್ರಕಟ ಮಾಡಿದೆ. ರೈತರಿಗೆ ಇದೊಂದು ಸಂತಸದ ಸುದ್ದಿ. ರಾಜ್ಯದಲ್ಲಿ ಉದ್ಭವಿಸಿರುವ ಅನಾವೃಷ್ಠಿಗಳ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಹಕಾರ ಸಂಸ್ಥೆಗಳಿಂದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಪಡೆದು ಸಾಲ ಮರುಪಾವತಿಸಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದನ್ನು ಮತ್ತು ಇದರಿಂದ ಸಹಕಾರ ಸಂಸ್ಥೆಗಳು ನಬಾರ್ಡ್ ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಪುನಃ ರೈತರಿಗೆ ಸಾಲ ನೀಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಇಂತಹ ಸುಸ್ತಿದಾರರಾದ ರೈತರನ್ನು ಋಣಮುಕ್ತರನ್ನಾಗಿ ಮಾಡಿ ಮುಂದಿನ ತಮ್ಮ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆದು ಅರ್ಹತೆ ಗಳಿಸಲು ಸರ್ಕಾರವು ಯೋಜನೆ ರೂಪಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:29.02.2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರಾತಿ ನೀಡಲಾಗಿದೆ.
ಸೌಲಭ್ಯವು ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ :31.12.2023 ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ ಮತ್ತು ಮೇಲೆ ತಿಳಿಸಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ.
ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಮುಂದುವರೆದು, ರಾಜ್ಯ ಸರ್ಕಾರದ ಬಡ್ಡಿ ರಿಯಾಯತಿ ಬದ್ಧತೆಯಡಿ ವಿತರಿಸಿರುವ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯು ಜಾರಿ ಇರುವ ಬಗ್ಗೆ, ಎಲ್ಲಾ ಸಾಲಗಾರ ಸದಸ್ಯರಿಗೆ ಪತ್ರದ ಮುಖೇನ ಸಾಲದ ಸೌಲಭ್ಯ ಮತ್ತು ಇದರಿಂದ ರೈತ ಸದಸ್ಯರಿಗೆ ದೊರೆಯುವ ರಿಯಾಯಿತಿ ವಿವರಗಳನ್ನು ಸಂಘದ ಮೂಲಕ ತಿಳಿಸುವ ವ್ಯವಸ್ಥೆಯನ್ನು ನಿಬಂಧಕರು ಮಾಡತಕ್ಕದ್ದು. ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ನಿಮ್ಮ ವ್ಯವಹಾರದ ಬ್ಯಾಂಕಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.