ತುಳು ಅಧಿಕೃತ ಭಾಷೆಗಾಗಿ ತುಳು ನಾಡಲ್ಲಿ ಹೋರಾಟ ಶುರು!
– ಕರಾವಳಿಯಲ್ಲಿ 5 ದಿನ ನಡೆಯಲಿದೆ ಹೊಸ ಅಭಿಯಾನ
– ಮೋದಿ, ಸಿದ್ಧರಾಮಯ್ಯ ಅವರಿಗೆ 10 ಸಾವಿರ ಪತ್ರ!
NAMMUR EXPRESS NEWS
ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಲು ಕರಾವಳಿ ಭಾಗದಲ್ಲಿ 5 ದಿನಗಳ ವಿಶಿಷ್ಟ ಅಭಿಯಾನವನ್ನು ಜನವರಿ 29ರಿಂದ ಫೆಬ್ರವರಿ 2 ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ಷೇತ್ರದ ಗಣ್ಯರು, ರಾಜಕಾರಣಿಗಳು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಹಾಗೂ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕೆನ್ನುವುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 10 ಸಾವಿರ ಪತ್ರಗಳನ್ನು ಬರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಈ ಅಭಿಯಾನಕ್ಕೆ ಪಕ್ಷ ಭೇದ ಮರೆತು ಜನ ಬೆಂಬಲಿಸಿದ್ದಾರೆ. ಕರಾವಳಿ ಭಾಗದ ಕನ್ನಡ ಸಂಘಟನೆಗಳು ಕೂಡಾ ಈ ಅಭಿಯಾನದಲ್ಲಿ ಕೈ ಜೋಡಿಸುವುದಾಗಿ ತಿಳಿಸಿದೆ. ತುಳು ಭಾಷೆಯು ಅಧಿಕೃತ ಲಿಪಿಯನ್ನು ಹೊಂದಿದ್ದು, ಈ ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನಮಾನ ಸಿಕ್ಕಲ್ಲಿ ಸಾಂವಿಧಾನಿಕ ಮಾನ್ಯತೆ ಸಿಗಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.