ರಾಜಧಾನಿಯಲ್ಲಿ ತೀರ್ಥಹಳ್ಳಿ ರೈತರ ಹೋರಾಟ!
– ಅವೈಜ್ಞಾನಿಕ ನೀರಾವರಿ ಯೋಜನೆ ವಿರುದ್ಧದ ಹೋರಾಟ
– ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ ರೈತರ ನಿಯೋಗ
– ಭೀಮೇಶ್ವರ ಸಂಗಮ ಉಳಿಸಿ ಸಮಿತಿಯ ಕಾರ್ಯಕರ್ತರು
NAMMUR EXPRESS NEWS
ಬೆಂಗಳೂರು : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಗ್ರಾಮಪಂಚಾಯ್ತಿಗಳ ಮಟ್ಟದಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಕುಡಿಯುವ ನೀರಿನ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ರೈತರ ನಿಯೋಗ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿತು. ಸುಮಾರು 50ಕ್ಕೂ ಹೆಚ್ಚು ರೈತರು ಹಾಗೂ ಗ್ರಾಮಸ್ಥರನ್ನು ಒಳಗೊಂಡಿದ್ದ ನಿಯೋಗವು ಸಚಿವರಿಗೆ ತಳಮಟ್ಟದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಗಮನಕ್ಕೆ ತಂದಿತು. ಸುಮಾರು 350 ಕೋಟಿ ವೆಚ್ಚದಲ್ಲಿ ಕೇಂದ್ರದ ‘ಜಲ ಜೀವನ ಮಿಷನ್’ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಹಿಂದಿನ ಸರಕಾರದ ಕೊನೆಗಳಿಗೆಯಲ್ಲಿ ಅನುಮೋದನೆ ನೀಡಿಲಾಗಿತ್ತು. ಈ ಕುರಿತು ಸ್ಥಳೀಯರಿಗೆ ಹಾಗೂ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಮಾಹಿತಿಯೂ ನೀಡಿರಲಿಲ್ಲ. ಸ್ಥಳೀಯ ಮಟ್ಟದಲ್ಲಿ ಯೋಜನೆಯಾಗಿ ಭೂಮಿ ಮಂಜೂರಾತಿಯಾಗುತ್ತಿದ್ದಂತೆ ಎಚ್ಚೆತ್ತ ಜನ ಸಾವಿರಾರು ಸಂಖ್ಯೆಯಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು.
ಇದೀಗ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿದ ನಿಯೋಗವು ಯೋಜನೆಯು ಅನುಷ್ಠಾನದ ನೆಪದಲ್ಲಿ ನಡೆಯುತ್ತಿರುವ ಬಾನಗಡಿಗಳನ್ನು ಗಮನಕ್ಕೆ ತಂದಿತು. ತಾವು ವಿಕೇಂದ್ರಿಕರಣದಲ್ಲಿ ನಂಬಿಕೆ ಮತ್ತು ಶ್ರದ್ಧೆಯನ್ನು ಹೊಂದಿದವರು. ಜಲ ಜೀವನ್ ಮಿಷನ್ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನೆಪದಲ್ಲಿ ವಿಕೇಂದ್ರೀಕರಣದ ಕಲ್ಪನೆಯನ್ನೆ ತಿರಸ್ಕರಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ವಿಕೇಂದ್ರಿಕರಣ ಯೋಜನೆಯು ಸದರಿ ಗ್ರಾಮಗಳ ಪ್ರಗತಿಗೆ ತೀವ್ರ ಧಕ್ಕೆ ತರಲಿದ್ದು, ಮಳೆನಾಡು ಎಂದು ಕರೆಸಿಕೊಳ್ಳುವ ಮಲೆನಾಡಿನಲ್ಲಿ ಮುಂದಿನ ದಿನಗಳಲ್ಲಿ ನೀರು ಸರಬರಾಜಿನ ವಿಚಾರದಲ್ಲಿ ತೀವ್ರ ಗೊಂದಲ ಮತ್ತು ಹಾಹಾಕಾರಗಳು ಉದ್ಭವಿಸುವುದು ಖಚಿತ,” ಎಂದು ನಿಯೋಗದ ಮುಖಂಡತ್ವ ವಹಿಸಿದ್ದ ರೈತ ನಾಯಕ ಕೋಡ್ಲು ವೆಂಕಟೇಶ್ ಸಚಿವರಿಗೆ ಮನದಟ್ಟು ಮಾಡಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ತಮ್ಮ ಇಲಾಖೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಮೇಲ್ಕಂಡ ಕುಡಿಯುವ ನೀರಿನ ಯೋಜನೆ ಕೇಂದ್ರೀಕರಣಕ್ಕೆ ಮಾತ್ರ ಒತ್ತುನೀಡಿದ್ದು, ಗ್ರಾಮ ಪಂಚಾಯ್ತಿಗಳ ಸ್ವಾಯತ್ಥತೆಗೆ ಧಕ್ಕೆ ತರುವ ಸ್ವರೂಪದ ಯೋಜನೆ ಆಗಿದೆ. ಇದರಿಂದಾಗಿ ಬೇಸಿಗೆ ಸಮಯದಲ್ಲಿ ಮಲೆನಾಡಿನ ಜೀವನಾಡಿಯಾದ ತುಂಗಾ ನದಿಯ ಹರಿವು ನಿಂತು ಹೋಗುವ ಸಾಧ್ಯತೆಯೂ ಇದೆ ಎಂದು ಕೋಡ್ಲು ವೆಂಕಟೇಶ್ ಆತಂಕವನ್ನು ಹಂಚಿಕೊಂಡರು.
ಸ್ಥಳೀಯ ಆಡಳಿತ ರೈತರ ಮತ್ತು ಗ್ರಾಮಸ್ಥರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ನೀರಿನ ಶುದ್ದೀಕರಣ ಘಟಕ- ವಾಟರ್ ಟೀಟ್ಮೆಂಟ್ ಪ್ಲಾಂಟ್(ಡಬ್ಲ್ಯೂಟಿಪಿ)ನ್ನು ಮೂಲ ಯೋಜನೆಯಲ್ಲಿ ಗುರುತಿಸಿದಂತೆ ತುಂಗಾ ನದಿ ದಡದಲ್ಲಿಯೇ ಮುಂದುವರಿಸುವ ಹಠಮಾರಿತಕ್ಕೆ ಬಿದ್ದಿದೆ. ಈ ಮೇಲಿನ ಕಾರಣಗಳಿಂದಾಗಿ, ತುಂಗಾ ನದಿಯ ಇಕ್ಕೆಲ ದಡಗಳ ನಿವಾಸಿಗಳು ಮತ್ತು ರೈತರು ಭವಿಷ್ಯದ ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ಹಾಗೆಯೇ, ಗ್ರಾಮ ಪಂಚಾಯ್ತಿಗಳು ವಿವಿಧ ಗ್ರಾಮಗಳಲ್ಲಿನ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಳಸಲು ವಿಫಲರಾಗುತ್ತಿದ್ದಾರೆ ಮತ್ತು ವಿಕೇಂದ್ರಿಕರಣದ ಆಶಯಗಳಿಂದ ವಿಮುಖರನ್ನಾಗಿ ಮಾಡಲಾಗುತ್ತಿದೆ, ಎಂದು ಅವರು ತಿಳಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ರೈತ ಮುಖಂಡರು, ತೀರ್ಥಹಳ್ಳಿಯಂಥ ಮಲೆನಾಡ ಪ್ರತಿ ಗ್ರಾಮಗಳಲ್ಲಿ ನೀರಿನ ಮೂಲಗಳು ಇದ್ದೆ ಇವೆ. ಅವುಗಳನ್ನೇ ಅಭಿವೃದ್ಧಿಪಡಿಸಿ ಗ್ರಾಮಗಳ ಕುಡಿಯುವ ನೀರಿನ ಸ್ವಾವಲಂಬನೆಯನ್ನ ಕಾಪಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಕೇಂದ್ರಿಕರಣ ವಿರೋಧಿ, ಅವೃಜ್ಞಾನಿಕ, ಭ್ರಷ್ಟತೆಯ ಗುಣಲಕ್ಷಣಗಳನ್ನು ಒಳಗೊಂಡಿರುವ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಸಚಿವರಲ್ಲಿ ಅವಹಾಲು ಸಲ್ಲಿಸಿದೆವು ಎಂದು ತಿಳಿಸಿದರು.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರೈತರ ಅವಹಾಲವನ್ನು ಆಲಿಸಿದ್ದೇನೆ. ಅವರು ನೀರಾವರಿ ಯೋಜನೆಗೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ ಅವೈಜ್ಞಾನಿಕ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬುದು ಅವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಅಧಿಕಾರಿಗಳು ಹಾಗೂ ರೈತರ ಸಭೆಯನ್ನು ಕರೆಯಲು ಎಸಿಎಸ್ಗೆ ಸೂಚಿಸಿದ್ದೇನೆ, ಎಂದು ಮಾಧ್ಯಮಗಳಿಗೆ ತಿಳಿಸಿದರು. ಇಲಾಖೆ ಮೂಲಗಳ ಪ್ರಕಾರ, ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೀರ್ಥಹಳ್ಳಿ ರೈತರ ಸಭೆಯನ್ನು ಕರೆಯಲಾಗಿದ್ದು, ಜಲ ಜೀವನ ಮಿಷನ್ ಅಡಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಯೋಜನೆಯ ಹಣೆಬರಹ ತೀರ್ಮಾನವಾಗಲಿದೆ.