ಶುರುವಾಯ್ತು ಯಕ್ಷಗಾನ ಸಂಭ್ರಮ!
– ಕರಾವಳಿ, ಘಟ್ಟದ ಮೇಲೆ ಬಂದ ಮೇಳಗಳು
– ಬಯಲು ರಂಗಸ್ಥಳದಲ್ಲಿ ಯಕ್ಷಗಾನದ್ದೇ ಹಬ್ಬ
NAMMUR EXPRESS NEWS
ತೀರ್ಥಹಳ್ಳಿ: ಗದ್ದೆಕೊಯ್ಲು, ಅಡಿಕೆ ಕೊಯ್ಲು ಮುಗಿದದ್ದೇ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಯಕ್ಷಗಾನಕ್ಕೆ ರಂಗಸ್ಥಳ ಸಿದ್ಧವಾಗುತ್ತಾ ಬರುತ್ತದೆ. ಆಗಲೇ ಯಕ್ಷಗಾನ ಬಯಲಾಟಗಳನ್ನು ಎಲ್ಲೆಡೆ ಆಡಿಸುವ ತಯಾರಿ ನಡೆದಿದ್ದು ಘಟ್ಟದ ಕೆಳಗಿನ ಮೇಳಗಳು ಘಟ್ಟದ ಮೇಲೆ ಬಂದಿವೆ. ಯಕ್ಷಗಾನ ಮತ್ತು ಕೋಲಗಳು ಮೂಲತಃ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕತಿಗಳಾಗಿದ್ದರೂ ಆ ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿರದೇ, ದಕ್ಷಿಣ ಕನ್ನಡ, ಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಹಾಗೆ ಇನ್ನೂ ಕರ್ನಾಟಕದ ಕೆಲವು ಭಾಗದಲ್ಲಿ ಕಾಣಸಿಗುತ್ತದೆ. ಅಷ್ಟೇ ಅಲ್ಲದೆ ಕೇರಳದ ಕೆಲವು ಕಡೆ ಯಕ್ಷಗಾನ ನೋಡಸಿಗುತ್ತದೆ. ಯಕ್ಷಗಾನ ಕಲೆಯನ್ನು ಸಾಮನ್ಯವಾಗಿ ಆಟ ಅಥವಾ ಬಯಲಾಟ ಎಂದು ಸಹ ಕರೆಯುತ್ತಾರೆ. ಯಕ್ಷಗಾನದಲ್ಲಿ ರಂಗಸ್ಥಳಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಯಕ್ಷಗಾನವನ್ನು ತೆಂಕು ತಿಟ್ಟು , ಬಡಗ ತಿಟ್ಟು ಎಂದು ಎರಡು ಭಾಗವಾಗಿ ಕೂಡ ವಿಂಗಡಿಸಲಾಗಿದೆ.
ಯಕ್ಷಗಾನ ಕಲೆ ವೈಶಿಷ್ಟತೆ:
ಯಕ್ಷಗಾನದ ನೃತ್ಯ ,ವೇಷ ಭೂಷಣ , ಸಂಗೀತ, ಇದು ಎಂತವರನ್ನು ಸಹ ಆಕರ್ಷಿಸುವಂತೆ ಮಾಡಿ ಜಾನಪದ ಕಲೆಗೆ ತನ್ನದೇ ರೀತಿಯಲ್ಲೇ ಕೊಡುಗೆ ನೀಡಿದೆ. ಪ್ರತಿ ಪ್ರದರ್ಶನವನ್ನು ಪ್ರಸಂಗ ಎಂದು ಕರೆಯಲಾಗಿ, ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಈ ಯಕ್ಷಗಾನವನ್ನು ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳಗಳನ್ನು ನೋಡುವುದು ಮತ್ತು ಕೇಳುವುದೇ ಕಣ್ಣಿಗೆ ಕಿವಿಗೆ ಹಬ್ಬ. ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಕೊಳಲಿನಂತಹ ವಾದ್ಯಗಳು ಬಹಳ ಆಕರ್ಷಿಸುತ್ತವೆ. ಯಕ್ಷಗಾನದ ಮತ್ತೊಂದು ಬಹುಮುಖ್ಯ ಆಕರ್ಷಣೆ ಪಾತ್ರಗಳು ಬಳಸುವ ವೇಷಭೂಷಣಗಳು. ಇವು ಬಹಳ ವಿಶಿಷ್ಟವಾಗಿದ್ದು ಪಾತ್ರಕ್ಕೆ ತಕ್ಕಂತೆ ಇರುತ್ತವೆ.
ಕರಾವಳಿಯ ಮೇಳಗಳ ಆಟ
ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದಾರ್ತಿ ಮೇಳ, ಕಟೀಲು, ಪೆರ್ಡುರು ಮೇಳಗಳು ಘಟ್ಟದ ಕೆಳಗಿನ ಮೇಳಗಳಾಗಿ ಜನಪ್ರಿಯವಾಗಿದ್ದರೆ, ಈಗೊಂದಿಷ್ಟು ವರ್ಷಗಳಿಂದ ಆಯಾ ದೇವಸ್ಥಾನಗಳ ದೇವರ ಹಿನ್ನೆಲೆಯನ್ನೇ ಕಥೆ ಅಥವಾ ಪ್ರಸಂಗದ ರೂಪದಲ್ಲಿ ಆಡಿ ತೋರಿಸುವ ಮೇಳಗಳು ಬಹಳಷ್ಟಿವೆ.
ಮಲೆನಾಡಲ್ಲೂ ಮೇಳಗಳಿವೆ!
ಶಿವಮೊಗ್ಗ ಜಿಲ್ಲೆಯ ಅಲಸೆ ಮೇಳ, ಹೊಸಳ್ಳಿ ಮೇಳ, ಸಿಗಂದೂರು, ಚಿಕ್ಕಮಗಳೂರು ಜಿಲ್ಲೆಯ ಸೀತೂರು ಮೇಳ ಹೀಗೆ ಹಲವು ಮೇಳಗಳು ಪ್ರಚಲಿತದಲ್ಲಿವೆ.
ಚಳಿ ನಡುವೆ ಯಕ್ಷಗಾನ!
ಚಳಿ ನಡುವೆ ಯಕ್ಷಗಾನ ನೋಡುವುದೇ ಒಂದು ಸೊಬಗು. ದಶಕಗಳ ಹಿಂದಿದ್ದ ಆಸಕ್ತಿ ಈಗಿಲ್ಲ. ಹಾಗಾಗಿ ಕೆಲವು ಮೇಳಗಳು ನಿಗದಿತ ಸಮಯದ ಯಕ್ಷಗಾನ ಆಡಲಿವೆ. ಇನ್ನು ಕೆಲ ಮೇಳಗಳು ಇಡೀ ರಾತ್ರಿ ಆಡಲಿವೆ.