ಸಿಇಟಿ ಅರ್ಜಿ ಸಲ್ಲಿಕೆಗೆ ಎಲ್ಲೆಡೆ ಸರ್ವರ್ ಡೌನ್!?
– ಮಕ್ಕಳ ಭವಿಷ್ಯದ ಜತೆ ಪ್ರಾಧಿಕಾರದ ಚೆಲ್ಲಾಟ
– ಮಾಹಿತಿ ಗೊಂದಲ: ವಿದ್ಯಾರ್ಥಿಗಳ ಪರದಾಟ
NAMMUR EXPRESS NEWS
ಬೆಂಗಳೂರು/ ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಿಇಟಿ ಅರ್ಜಿ ಸಲ್ಲಿಕೆಗೆ ಇನ್ನೂ 10 ದಿನ ಮಾತ್ರ ಬಾಕಿ ಇದ್ದು, ಸರ್ವರ್ ಡೌನ್ ಸಮಸ್ಯೆ ಎದುರಾಗಿದೆ. ಇದರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರ್ಕಾರ ತಕ್ಷಣ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯಕ್ಕೆ ಗೊಂದಲದ ಮಸುಕು ಮುಚ್ಚಲಿದೆ. ಅರ್ಜಿ ಸಲ್ಲಿಕೆಗೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೇ ಕಾಯುತ್ತಿದ್ದರೂ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ, ಇನ್ನು, ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಅಲಭ್ಯತೆ ಇರುವುದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವು ದಕ್ಕಾಗಿ ಸೈಬರ್ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಸಿಇಟಿ ಅರ್ಜಿ ಸಲ್ಲಿಕೆಗೆ ಜ.10ರಿಂದ ಅವಕಾಶ ಕಲ್ಪಿಸಲಾಗಿತ್ತು. ಈ ಮಧ್ಯೆ, ನಾಲ್ಕು ದಿನಗಳು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ನಿಂತಿತ್ತು.
ಅರ್ಜಿ ವೇಳೆ ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿರುವುದರಿಂದ ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಸರ್ವರ್ ಗೆ ಅಪ್ ಲೋಡ್ ಆಗುತ್ತಿಲ್ಲ ಎಂದು ಕೆಇಎ ವಿರುದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯು ಅರ್ಜಿ ವೇಳೆ ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿ, ರಾಜ್ಯ ವಿದ್ಯಾರ್ಥಿ ಇತ್ಯಾದಿ ಪ್ರಮಾಣ ಪತ್ರಗಳನ್ನು ಅಪ್ ಲೋಡ್ ಮಾಡಬೇಕು. ಆದರೆ, ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ರಾತ್ರಿ ಸಮಯದಲ್ಲಿ ಮಾತ್ರ ಒಂದಷ್ಟು ಸಮಯ ಸರ್ವರ್ ಸಿಗುತ್ತದೆ. ಆದರೆ, ಹಗಲಿನಲ್ಲಿ ಸರ್ವರ್ ಸಮಸ್ಯೆಯಿಂದ ದಾಖಲೆಗಳನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅರ್ಜಿ ಸಲ್ಲಿಕೆ ಮೊದಲ ದಿನವೇ 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಕೆಇಎ ತಿಳಿಸಿತ್ತು. ಇನ್ನು, ಈ ಪ್ರಕರಣ ಸಂಬಂಧ ಕೆಇಎ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ.
ಸರಿಯಾದ ಮಾಹಿತಿ ನೀಡದ ಪ್ರಾಧಿಕಾರ!?
ಪ್ರತಿ ವರ್ಷವೂ ಮಾಹಿತಿ ಪುಸ್ತಕ ನೀಡುವುದಿಲ್ಲ. ನೀಟ್, ಜೆಇಇಯಲ್ಲಿ ನೀಡುವಂತೆ ಮಾಹಿತಿ ನೀಡಿರುವುದಿಲ್ಲ. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಗೊಂದಲ ಇದೆ. ಅರ್ಜಿ ಹಾಕುವ ಮಕ್ಕಳಿಗೆ ಭಾರೀ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಪೂರ್ಣ ಮಾಹಿತಿ, ಸ್ಪಷ್ಟನೆ ಇಲಾಖೆಗೆ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ಟಾಟ್ಸ್ ನಂಬರ್ ಎಲ್ಲಿ ಪಡೆಯಬೇಕು ಎಂಬುದೇ ಗೊಂದಲ ಇದೆ. ಮತ್ತು ತಂತ್ರಜ್ಞಾನ ಅಪ್ಡೇಟ್ ಮಾಡುವ ಅವಶ್ಯಕತೆ ಇದೆ. ಕೂಡಲೇ ಸರ್ಕಾರ ಗಮನಿಸಿ ಮಕ್ಕಳ ಬದುಕಲ್ಲಿ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕಿದೆ. ಜತೆಗೆ ಪರೀಕ್ಷಾ ಪ್ರಾಧಿಕಾರ ಗಮನಿಸಿ ಮತ್ತಷ್ಟು ಸಮಯ ಅವಕಾಶ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.