ನಿಮ್ಮೆಲ್ಲ ಅಸ್ತಿ ದಾಖಲೆ ಇನ್ನು ಡಿಜಿಟಲ್!
– ರಾಜ್ಯದ 31 ಜಿಲ್ಲೆಯಲ್ಲೂ ಪ್ರಾಯೋಗಿಕ ಪ್ಲಾನ್
– 2000 ಸರ್ವೇಯರ್ ನೇಮಕ: ಏನಿದು ಹೊಸ ಯೋಜನೆ?
NAMMUR EXPRESS NEWS
ಬೆಳಗಾವಿ: ರಾಜ್ಯದಲ್ಲಿ ಈ ವಾರದಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಿದ್ದೇವೆ. 31 ಜಿಲ್ಲೆಗಳಲ್ಲಿ 31 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುವುದು. ಒಂದು ಜಿಲ್ಲೆಯಲ್ಲಿ ಒಂದು ತಾಲೂಕನ್ನು ಆಯ್ಕೆ ಮಾಡಿಕೊಂಡು ಮೂರು ತಿಂಗಳಲ್ಲಿ ಎಲ್ಲ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಬೇಕಾದ ಅನುದಾನವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಳೆಯ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸಂರಕ್ಷಿಸಿ ಡಿಜಿಟಲೀಕರಣಗೊಳಿಸುವದು ಈ ಯೋಜನೆಯ ಉದ್ದೇಶ ಎಂದರು. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತಹಸೀಲ್ದಾರ ಕಚೇರಿಗಳಲ್ಲಿ 95% ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಎಸಿ ಕಚೇರಿ ನ್ಯಾಯಾಲಯದಲ್ಲಿ 35 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಸಚಿವರು ಹೇಳಿದರು.
2000 ಸರ್ವೇಯರ್ ನೇಮಕ ಶೀಘ್ರ
ಸರ್ವೇಯರ್ ಕೊರತೆ ಬಹಳ ದಿನಗಳಿಂದ ಇತ್ತು. ಪರಿಹಾರ ಕಂಡುಕೊಳ್ಳಲು 2000 ಸರ್ವೇಯರ್ ನೇಮಕಾತಿ ಮಾಡಿಕೊಳ್ಳುತ್ತಿದೆ. 750 ಪರವಾನಗಿ ಪಡೆದ ಸರ್ವೇಯರ್ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಯಾವ್ಯಾವ ತಾಲೂಕಿನಲ್ಲಿ ಸರ್ವೇ ಕಾರ್ಯ ಹೆಚ್ಚು ಬಾಕಿ ಇವೆಯೋ ಅಂತಹ ತಾಲೂಕಿಗೆ ಹಂಚಿಕೆ ಮಾಡಲಾಗುವುದು. ಇದರಿಂದ ತ್ವರಿತವಾಗಿ ಪ್ರಕರಣ ವಿಲೇವಾರಿಯಾಗಲು ಸಾಧ್ಯವಾಗಲಿದೆ ಎಂದರು.