ಟ್ರೈನ್ ನಿಂದ ಕೆಳಕ್ಕೆ ಬಿದ್ದು ಮಹಿಳೆ ಸಾವು!
– ಕೊಲೆಯೋ… ಆಕಸ್ಮಿಕ ಸಾವೋ…?
– ಹೊಸನಗರದಲ್ಲಿ ಮನೆ ದರೋಡೆ: 5 ಲಕ್ಷದ ಚಿನ್ನ ಕಳ್ಳತನ
– ಹಾಫ್ ಹೆಲ್ಮೆಟ್, ಕರ್ಕಶ ಶಬ್ದದ ಸೈಲೆನ್ಸರ್ಗಳ ಮೇಲೆ ರೋಲರ್ ಹತ್ತಿಸಿದ ಶಿವಮೊಗ್ಗ ಪೊಲೀಸರು!
– ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ
– ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ
NAMMUR EXPRESS NEWS
ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ವಾಪಸ್ ಬೆಂಗಳೂರು ಟ್ರೈನ್ನಲ್ಲಿ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಮೂಲದ ಮಹಿಳೆಯೊಬ್ಬರ ಸಾವು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಲ್ಲಿರುವ ಅರಣ್ಯ ಭವನದ ಸಿಬ್ಬಂದಿಯಾಗಿರುವ ಮಹಿಳೆ ಮೃತದೇಹ ತುಮಕೂರು ಸಮೀಪ ರೈಲ್ವೆ ಹಳಿ ಬಳಿ ಬಿದ್ದಿದೆ. ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯ ಹೆಸರು ಅನ್ನಪೂರ್ಣ, ವಯಸ್ಸು 50 . ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನವರು. ಬೆಂಗಳೂರು ಅರಣ್ಯ ಭವನದಲ್ಲಿ ಕೆಲಸ.ಶಿವಮೊಗ್ಗದಲ್ಲಿ ನಡೆದ ಡಿಎಅರ್ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಕೆಲಸ ನಿರ್ವಹಿಸಿ ವಾಪಸ್ ಶಿವಮೊಗ್ಗ-ಬೆಂಗಳೂರು ಟ್ರೈನ್ ನಲ್ಲಿ ತೆರಳುತ್ತಿದ್ದರು.
ಬೆಂಗಳೂರು ಮಲ್ಲೇಶ್ವರಂ ನಲ್ಲಿ ವಾಸವಿದ್ದ ಇವರು ಜನವರಿ 30 ರಂದು ಬೆಂಗಳೂರುಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಅವರ ಸಹೋದರ ಕೂಡ ಟ್ರೈನ್ನಲ್ಲಿದ್ದರು. ಸಹೋದರ ರಿಸರ್ವೇಶನ್ ಭೋಗಿಯಲ್ಲಿದ್ದರು. ಮೃತ ಅನ್ನಪೂರ್ಣರವರು ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಹೋದರ ಇಳಿದು ಅನ್ನಪೂರ್ಣ ರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಕಾಣದೆ ಇದ್ದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಪ್ರತಿ ಸ್ಟೇಷನ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗಲೂ ಯಾವುದೇ ವಿಷಯ ಪತ್ತೆಯಾಗಿಲ್ಲ.
ಆ ಬಳಿಕ ರೈಲ್ವೆ ಹಳಿಗಳ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರೇಹಳ್ಳಿ ಸಮೀಪ ಅನ್ನಪೂರ್ಣರವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಯೇ ಸಮೀಪದಲ್ಲಿ ಅವರ ಬ್ಯಾಗ್ ಸಹ ಪತ್ತೆಯಾಗಿದೆ. ಅನ್ನಪೂರ್ಣರವರು ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆಕಸ್ಮಿಕವಾಗಿ ಕೆಳಕ್ಕೆ ಬಿದ್ದರೋ ಅಥವಾ ಅವರನ್ನ ರೈಲಿನಿಂದ ತಳ್ಳಲಾಗಿದೆಯೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಈ ಸಂಬಂಧ ಕುಟುಂಬಸ್ಥರು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.
ಹಾಫ್ ಹೆಲ್ಮೆಟ್, ಸೈಲೆನ್ಸರ್ಗಳ ಮೇಲೆ ರೋಲರ್ ಹತ್ತಿಸಿದ ಪೊಲೀಸರು!
ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳು ಮತ್ತು ಹಾಫ್ ಹೆಲ್ಮೆಟ್ಗಳ ಮೇಲೆ ಸಂಚಾರ ಠಾಣೆ ಪೊಲೀಸರು ರೋಡ್ ರೋಲರ್ ಹರಿಸಿ ನಾಶ ಪಡಿಸಿದ ಘಟನೆ ಈಗ ವೈರಲ್ ಆಗಿದೆ. ಸಾರ್ವಜನಿಕರಿಗೆ ಇವುಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಗೋಪಿ ಸರ್ಕಲ್ನಲ್ಲಿ ರೋಡ್ ರೋಲರ್ ಹತ್ತಿಸಿ ನಾಶಪಡಿಸಲಾಯಿತು. ಸುಮಾರು 3 ಸಾವಿರ ಹಾಫ್ ಹೆಲ್ಮೆಟ್ಗಳು, 70 ಸೈಲೆನ್ಸರ್ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಸರ್ಕಲ್ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು.
ಮನೆಗೆ ನುಗ್ಗಿ ರೂ.4.65ಲಕ್ಷದ ಚಿನ್ನಾಭರಣ ಕಳ್ಳತನ
ಹೊಸನಗರ: ಮನೆಗೆ ನುಗ್ಗಿ ರೂ.4.65 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಗಳನ್ನು 24 ಗಂಟೆಯೊಳಗೆ ಆಭರಣ ಸಹಿತ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೂಲಿಗ್ಗೇರಿ ನಿವಾಸಿಗಳಾದ ಸುಹಾನ್ 21, ಅಶೋಕ 24, ಗಣೇಶ 30 ಬಂಧಿತ ಆರೋಪಿಗಳು. ನೂಲಿಗ್ಗೇರಿ ನಿವಾಸಿ ರಾಜಮ್ಮ ಮನೆಯಲ್ಲಿರದ ವೇಳೆ ಗಮನಿಸಿ ರಾತ್ರಿ ಮನೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಚಿನ್ನದ ಸರ, ಉಂಗುರ, ಬ್ರಾಸ್ ಲೇಟ್ ಸೇರಿದಂತೆ ರೂ.4.65 ಲಕ್ಷ ಮೌಲ್ಯದ 94 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದರು. ರಾಜಮ್ಮ ಮನೆಗೆ ವಾಪಾಸಾಗಿ ನೋಡುತ್ತಿದ್ದಂತೆ ಕಳ್ಳತನ ಆಗಿದ್ದು ತಿಳಿದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಗಜಾನನ ವಿ ಸುತಾರ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ ಮತ್ತು ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು. ಪ್ರಕರಣದ ವರದಿ ದಾಖಲಾಗಿ 24 ಗಂಟೆಯೊಳಗೆ ಮೂವರು ಆರೋಪಿಗಳ ಜೊತೆಗೆ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಎಂ.ಜಿ, ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪ ಭಾಗವಹಿಸಿದ್ದರು. ಕ್ಷಿಪ್ರವಾಗಿ ಪ್ರಕರಣ ಬೇಧಿಸಿ ಚಿನ್ನಾಭರಣ ವಶಕ್ಕೆ ತೆಗೆದುಕೊಂಡ ಪೊಲೀಸರ ಕಾರ್ಯಾಚರಣೆಯನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಗಜಾನನ ವಿ ಸುತಾರ ನಗರ ಠಾಣೆಗೆ ಆಗಮಿಸಿ ಪೊಲೀಸರನ್ನು ಅಭಿನಂದಿಸಿದ್ದಾರೆ.
ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಶೃಂಗೇರಿ ತಾಲೂಕಿನ 79 ವರ್ಷದ ವ್ಯಕ್ತಿ ಹಾಗೂ ಕೊಪ್ಪ ತಾಲೂಕು ಭತ್ರಹಳ್ಳಿ ಜೋಗಿಸರದ 35 ವರ್ಷದ ಖಾಸಗಿ ಶಾಲಾ ಶಿಕ್ಷಕಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಂಬಂಧಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ ಉಣ್ಣೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ಚಿಕ್ಕಮಗಳೂರು ನಗರದಲ್ಲಿ ತರಬೇತಿಗೆ ಹೋಗಿ ಬಂದಿದ್ದನ್ನು ಹೊರತುಪಡಿಸಿದರೇ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ತಿಳಿದು ಬಂದಿದೆ. ಗ್ರಾಮದಲ್ಲಿನ ಪ್ರಾಣಿಗಳಲ್ಲಿನ ಉಣ್ಣೆಯಿಂದ ಸೋಂಕು ಬಂದಿರಬಹುದೆಂದು ಅಂದಾಜಿಸಲಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ
ರಿಪ್ಪನ್ಪೇಟೆ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪೊಲೀಸ್ ಪಿಎಸ್ ಐ ಪ್ರವೀಣ್ ಎಸ್ ಪಿ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪಟ್ಟಣದ ಪಿಎಸ್ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತುಂಬಿಕೊಂಡು ಕೋಡೂರು ಮಾರ್ಗವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡೆಸಿ ಮೂರು ಟಿಪ್ಪರ್ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಚ್ ಸಿ ಉಮೇಶ್, ಶಿವಕುಮಾರ್ ನಾಯ್ಕ ಹಾಗೂ ಮಧುಸೂಧನ್ ಇದ್ದರು.