ರಾಜಕಾರಣಕ್ಕೆ ದಳಪತಿ ವಿಜಯ್!
– ತಮಿಳಗ ವೆಟ್ರಿ ಕಳಗಂ’ ಹೊಸ ಪಕ್ಷ ಘೋಷಣೆ
– ರಜನೀಕಾಂತ್ ಎಂಟ್ರಿ ಅಗ್ತಾರಾ?
NAMMUR EXPRESS NEWS
ಚೆನ್ನೈ: ತಮಿಳಿನ ಹೆಸರಾಂತ ನಟ ದಳಪತಿ ವಿಜಯ್ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದು, ‘ತಮಿಳಗ ವೆಟ್ರಿ ಕಳಗಂ’ ಹೆಸರಿನ ಹೊಸ ರಾಜಕೀಯ ಪಕ್ಷ ಆರಂಭಿಸಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.ಈ ಘೋಷಣೆ ಹೊರಬೀಳುತ್ತಿದ್ದಂತೆಯೆ ಅವರ ಅಭಿಮಾನಿಗಳು ಸಂಭ್ರಮಿಸಿದ್ದು ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಶುರುವಾಗಿದೆ. ಭ್ರಷ್ಟಾಚಾರ ಮತ್ತು ಜಾತಿ, ಧರ್ಮದ ಭೇದಗಳಿಲ್ಲದ ನಿಸ್ವಾರ್ಥ, ಪಾರದರ್ಶಕ, ದೂರದೃಷ್ಟಿಯ ಹಾಗೂ ದಕ್ಷ ಆಡಳಿತಕ್ಕೆ ದಾರಿ ಮಾಡಿಕೊಡುವ ರಾಜಕೀಯ ಆಂದೋಲನಕ್ಕಾಗಿ ತಮಿಳುನಾಡಿನ ಜನರು ಹಂಬಲಿಸುತ್ತಿದ್ದಾರೆ ಎಂದಿರುವ ವಿಜಯ್ ಈಗಾಗಲೇ ಪಕ್ಷವನ್ನು ನೋಂದಣಿ ಕೂಡ ಮಾಡಿದ್ದಾರೆ.
ಎಂ.ಜಿ. ರಾಮಚಂದ್ರನ್, ಜೆ.ಜಯಲಲಿತಾ ಮತ್ತು ವಿಜಯಕಾಂತ್ ಅವರು ಚಿತ್ರರಂಗದಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ರೀತಿಯೇ ವಿಜಯ್ ಕೂಡ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಈಗ ಅದು ನಿಜವಾಗಿದೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವಿಜಯ್, ತಮಿಳುನಾಡಿನ ಜನರು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡಿಎಂಕೆ ಸರ್ಕಾರದ ಅವಧಿ 2026ರಲ್ಲಿ ಕೊನೆಗೊಳ್ಳಲಿದೆ.
ಏನಿದು ಪಕ್ಷದ ಅರ್ಥ
‘ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂದರ್ಥ. ‘ತಂದೆ–ತಾಯಿಯ ನಂತರ, ಹೆಸರು ಮತ್ತು ಕೀರ್ತಿ ತಂದುಕೊಟ್ಟ ರಾಜ್ಯದ ಜನತೆಗೆ ಮನಃಪೂರ್ವಕವಾಗಿ ಸಹಾಯ ಮಾಡಬೇಕೆನ್ನುವುದು ಬಹುದಿನಗಳ ಬಯಕೆಯಾಗಿತ್ತು’ ಎಂದು ಹೆಸರಾಂತ ಸಿನಿಮಾ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರ ಪುತ್ರರೂ ಆದ ವಿಜಯ್, ಪಕ್ಷ ಸ್ಥಾಪನೆಯ ಹಿಂದಿರುವ ಉದ್ದೇಶವನ್ನು ತೆರೆದಿಟ್ಟರು.ಪಕ್ಷದ ಅಧ್ಯಕ್ಷರಾಗಿ ವಿಜಯ್ ಜವಾಬ್ದಾರಿ ಹೊತ್ತಿದ್ದಾರೆ. ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ’ ಎಂದೂ ವಿಜಯ್ ಹೇಳಿದ್ದಾರೆ. ಆಡಳಿತ ಕುಸಿತ, ಭ್ರಷ್ಟಾಚಾರ ಮತ್ತು ಏಕತೆಗೆ ಧಕ್ಕೆ ತರುವ ವಿಭಜಕ ರಾಜಕಾರಣದಿಂದ ತುಂಬಿರುವ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ 49ರ ಹರೆಯದ ನಟ ವಿಜಯ್ ತೀವ್ರ ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆ
‘ಪಕ್ಷದ ನೋಂದಣಿಗೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿ) ಅರ್ಜಿ ಸಲ್ಲಿಸಲಾಗಿದೆ’ ಎಂದು ವಿಜಯ್ ತಿಳಿಸಿದ್ದಾರೆ. ಕಳೆದ ಜನವರಿ 25ರಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಕ್ಷದ ಸಂವಿಧಾನ ಮತ್ತು ಬೈಲಾಗಳನ್ನು ಸಹ ಅಂಗೀಕರಿಸಲಾಯಿತು. ಇಸಿ ಮಾನ್ಯತೆ ಸಿಕ್ಕಿದ ನಂತರ ಪಕ್ಷದ ನೀತಿಗಳು, ಧ್ವಜ, ಚಿಹ್ನೆ ಮತ್ತು ಇತರ ಯೋಜನೆಗಳನ್ನು ನಂತರ ಅಂತಿಮಗೊಳಿಸಲಾಗುವುದು. ಈಗಾಗಲೇ ಒಪ್ಪಿಕೊಂಡಿರುವ ಚಿತ್ರವನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ಮತ್ತು ಸಾರ್ವಜನಿಕ ಸೇವೆಯ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿರುವುದಾಗಿಯೂ ಹೇಳಿದರು.