3 ಟನ್ ಗೋವಿನ ಮೂಳೆ ಪತ್ತೆ: ಆರೋಪಿ ಅರೆಸ್ಟ್!
– ಭದ್ರಾವತಿಯಲ್ಲಿ ನಡೆದ ಘಟನೆ: ಏನಿದು ಘಟನೆ?
– ಮರದ ಹರೆ ಕಡಿದಿದ್ದಕ್ಕೆ ಯುವಕರ ಮೇಲೆ ಹಲ್ಲೆ!
– ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್
– ಆಕಸ್ಮಿಕ ಬೆಂಕಿ, ಮನೆ ಸಂಪೂರ್ಣ ಭಸ್ಮ
– 3 ಟನ್ ಗೋವಿನ ಮೂಳೆ ಪತ್ತೆ: ಅರೆಸ್ಟ್
NAMMUR EXPRESS NEWS
ಶಿವಮೊಗ್ಗ: ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದಲ್ಲಿ ಯುವಕರ ಮೇಲೆ ಇನ್ನೊಂದು ಸಮುದಾಯದ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಆರು ಯುವಕರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಕಡಿದಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಇನ್ನೊಂದು ಯುವಕರ ಗುಂಪು ಇಟ್ಟುಕೊಂಡಿತ್ತು. ವಿಷಯ ತಿಳಿದು ಯುವಕರನ್ನು ಬಿಡಿಸಿಕೊಂಡು ಬರಲು ಹಿಂದು ಯುವಕರ ಗುಂಪು ಹೋಗಿದೆ.
ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ 6 ಯುವಕರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್ ಠಾಣೆ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜನರು ಸೇರಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್!
ಹೊಳೆಹೊನ್ನೂರು : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನವೇರಿ ಸಮೀಪದ ಮತ್ತಿಹಳ್ಳ ಸೇತುವೆ ಮೇಲಿಂದ ಲಾರಿ ಕೆಳಗೆ ಬಿದ್ದಿದೆ. ಎದುರಿನಿಂದ ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಚಕ್ರಗಳು ಕಳಚಿಕೊಂಡು, ಲಾರಿ ಜಖಂ ಆಗಿದೆ. ಎರಡು ಕ್ರೇನ್ಗಳನ್ನು ಬಳಸಿ ಭಾನುವಾರ ಲಾರಿಯನ್ನು ಮೇಲೆತ್ತಲಾಯಿತು. ಕಾರ್ಯಾಚರಣೆಯನ್ನು ವೀಕ್ಷಿಸಲು ಈ ಭಾಗದಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿದ್ದರು.
ಆಕಸ್ಮಿಕ ಬೆಂಕಿ, ಮನೆ ಸಂಪೂರ್ಣ ಭಸ್ಮ!
ಶಿವಮೊಗ್ಗ ನಗರದ ನ್ಯೂಮಂಡ್ಲಿಯ ಇಲಿಯಾಜ್ ನಗರದಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಹೆಂಚಿನ ಮನೆ ಸಂಪೂರ್ಣ ಕರಕಲಾಗಿದೆ. ಇಡಿ ಮನೆಯೇ ಕುಸಿದು ಬಿದ್ದಿದೆ. ಇಲಿಯಾಜ್ ನಗರದ ಶಿವಾನಂದ್ ಎಂಬುವರಿಗೆ ಈ ಮನೆ ಸೇರಿದ್ದು ಬೆಂಕಿಯ ಶಾಖಕ್ಕೆ ಇಡೀ ಮನೆಯೇ ಉರಿದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಂತರ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. 1.5 ಲಕ್ಷ ರೂ. ನಗದು ಮತ್ತು 10 ತೊಲ ಬಂಗಾರದ ಆಭರಣಗಳು ಈ ಬೆಂಕಿಗೆ ಆಹುತಿಯಾಗಿದೆ ಎನ್ಬಲಾಗುತ್ತಿದೆ ಮನೆ, ನಗದು ಮತ್ತು ಚಿನ್ನಾಭರಣ ಸೇರಿ 5 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಯವರು ಧಾವಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
3 ಟನ್ ಗೋವಿನ ಮೂಳೆ ಪತ್ತೆ!: ಓರ್ವ ಅರೆಸ್ಟ್!
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಎಚ್ಎಂ ಟಿಂಬರ್ ಅಂಡ್ ಫರ್ನಿಚರ್ ಅಂಗಡಿ ಹಿಂಭಾಗದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಘಟನೆ ಸಂಬಂಧ ಆರೋಪಿ ಮೋಮಿನ್ ಎಂಬಾತನನ್ನು ಬಂಧಿಸಿದ ಪೊಲೀಸರು. ಹಿಂದೂ ಸಂಘಟನೆ ಕಾರ್ಯಕರ್ತ ಅರಳಿಹಳ್ಳಿ ದೇವರಾಜ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ರಾಶಿ ರಾಶಿ ಗೋವಿನ ಮೂಳೆ ಪತ್ತೆ ಮಾಡಿದ್ದಾರೆ. ಭದ್ರಾನದಿಯ ತಟದಲ್ಲಿರುವ ತೋಟದಲ್ಲಿ ಅನಧಿಕೃತ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಪೊಲೀಸರು.
ದಾಳಿ ವೇಳೆ ಗೋದಾಮಿನ ಒಳಗೆ ಹಾಗೂ ಹೊರಗೆ ಇದ್ದ ಗೋವಿನ ಮೂಳೆಗಳು ಹಾಗೂ ಮಾಂಸದ ತುಣುಕುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಸುಮಾರು 3ಟನ್ ತೂಕದ ಗೋವಿನ ಮೂಳೆಯ ಭಾಗವನ್ನು ಸಂಗ್ರಹಿಸಿಡಲಾಗಿತ್ತು. ಗೋಹತ್ಯೆ ನಿಷೇಧವಿದ್ದರೂ, ನಿರಂತರವಾಗಿ ಹತ್ಯೆ ಮಾಡಿ ಮೂಳೆ ಸಂಗ್ರಹಿಸಿರುವ ಶಂಕೆ. ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಗೋವಿನ ಮೂಳೆ ಪತ್ತೆಯಾಗಿವೆ.