ಪರಶುರಾಮ ಥೀಮ್ ಪಾರ್ಕ್ ಕೇಸ್ ಸಿಐಡಿಗೆ!
– ಅವ್ಯವಹಾರ ತನಿಖೆಗೆ ಸಿಎಂ ಆದೇಶ
– ಕರಾವಳಿಯಲ್ಲಿ ಭಾರೀ ಸಂಚಲನ
– ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಸಂಕಟ!
NAMMUR EXPRESS NEWS
ಕಾರ್ಕಳ: ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಸಿಒಡಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಆಡಳಿತವಿದ್ದಾಗ ಆಗ ಸಚಿವರೂ ಆಗಿದ್ದ ಶಾಸಕ ಸುನಿಲ್ ಕುಮಾರ್ ಅವರ ಮುತುವರ್ಜಿಯಿಂದಾಗಿ ಉಮಿಕಲ್ನ ಬೋಳುಬೆಟ್ಟದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಿಸಿ ಉದ್ಘಾಟಿಸಿಲಾಗಿತ್ತು.
ಆದರೆ ರಾಜ್ಯದಲ್ಲಿ ಸರಕಾರ ಬದಲಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಪರಶುರಾಮ ಥೀಂ ಪಾರ್ಕ್ ನಿರ್ಮಾಣದಲ್ಲಿ ಭ್ರಷ್ಟಾಚಾರವಾಗಿದೆ ಮತ್ತು ಕಳಪೆ ಕಾಮಗಾರಿ ಮಾಡಲಾಗಿದೆಎಂದು ಕೆಲವರು ಆರೋಪಿಸಿ ಪ್ರತಿಭಟನೆಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ತನಿಖೆಗೆ ಆದೇಶಿಸಲಾಗಿತ್ತು. ಆ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಆದರೆ ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಸರಕಾರ ಸಿಒಡಿ ತನಿಖೆಗೆ ಆದೇಶಿಸಿದೆ.
ಆದೇಶದಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಫೆ. 2ರಂದು ಬರೆದ ಪತ್ರದಲ್ಲಿ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ವರದಿ ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆದಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಒಡಿ ತನಿಖೆಗೆ ಆದೇಶಿಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.