ಕಟೀಲ್ ಮನೆಗೆ ಮುತ್ತಿಗೆ: 20ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ!
– ದಕ್ಷಿಣ ಕನ್ನಡ ಜಿಲ್ಲೆಗೆ ಬಾರದ ಅನುದಾನ: ಆಕ್ರೋಶ
– ತುಮಕೂರು: ಶಿಕ್ಷಕರು-ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
– ಮಂಗಳೂರು: ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್
NAMMUR EXPRESS NEWS
ಮಂಗಳೂರು: ದ.ಕ.ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದು ಎನ್ಎಸ್ ಯುಐ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲು ಅವರ ಮನೆಗೆ ಮುತ್ತಿಗೆ ಯತ್ನ ನಡೆಸಿದ್ದಾರೆ. ಒಂದು ಕಡೆ ದೆಹಲಿ, ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರ ಹೋರಾಟದ ನಡುವೆ ನಳಿನ್ ಕುಮಾರ್ ಕಟೀಲ್ ಮನೆಗೆ ಮುತ್ತಿಗೆ ಹಾಕಲಾಗಿದೆ. ಉರ್ವ ಠಾಣೆಯ ಪೊಲೀಸರು ನಳಿನ್ ಅವರ ಮನೆಗಿಂತ ಮೊದಲೇ ಬ್ಯಾರಿಕೇಡ್ ಅಳವಡಿಸಿ ಮುತ್ತಿಗೆ ಹಾಕುವವರನ್ನು ತಡೆದಿದ್ದಾರೆ.
ಈ ವೇಳೆ ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಮುತ್ತಿಗೆ ಹಾಕಲು ಅವಕಾಶ ನೀಡಬೇಕೆಂದು ಉರ್ವ ಠಾಣಾಧಿಕಾರಿ ಭಾರತಿಯವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ನೂಕಿ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡದೆ 20-25 ಮಂದಿ ಎನ್ಎಸ್ ಯುಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತ್ತಿಗೆಯತ್ನದ ವೇಳೆ ನಳಿನ್ ಹಠಾವೋ ದೇಶ್ ಬಚಾವೋ ಘೋಷಣೆ ಕೇಳಿ ಬಂದಿದೆ
ಶಿಕ್ಷಕರು-ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ತುಮಕೂರು: ಬಿಸಿಯೂಟ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರು ಅಸ್ವಸ್ಥಗೊಂಡಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ. ಅಂಬಾಭವಾನಿ ಅನುದಾನಿತ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಮೊಸರನ್ನ ಸೇವಿಸಿದ್ದರು. ಶಾಲೆ ಮುಗಿಸಿ ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಎಲ್ಲರಿಗೂ ವಾಂತಿ ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥಗೊಂಡವರನ್ನು ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. 12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್ ಟಿಹೆಚ್ಓ ಡಾ.ಮರಿಯಪ್ಪ ಹಾಗೂ ಬಿಇಒ ಬೋರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ 13 ವಿದ್ಯಾರ್ಥಿಗಳಿಗೆ ಕುಣಿಗಲ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಂಗಳೂರಲ್ಲೂ ಹೊಟ್ಟೆ ನೋವಿನಿಂದ ನರಳಾಡಿದ ವಿದ್ಯಾರ್ಥಿಗಳು!
ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕಾಲೇಜಿನ ಹಾಸ್ಟೆಲ್ನಲ್ಲಿ ರಾತ್ರಿ ಊಟ ಮಾಡಿದ ಬಳಿಕ ನೂರಾರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ನರಳಾಡಿದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.