ಪ್ರೇಮಿಗಳ ದಿನ ಗುಲಾಬಿ ಸಿಗೋದು ಡೌಟು!
– ಕೆಂಗುಲಾಬಿಗೆ ಭಾರಿ ಬೇಡಿಕೆ: ವಿದೇಶಕ್ಕೆ ಕೋಟಿ ಗುಲಾಬಿ ರಫ್ತು
– ಕೇಕ್,ಚಾಕೊಲೇಟ್, ಗಿಫ್ಟ್ಗಳಿಗೆ ಡಿಮ್ಯಾಂಡ್ ಡಿಮ್ಯಾಂಡ್
NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಿಂದ ವಾರಕ್ಕೂ ಮುನ್ನವೇ ಕೆಂಗುಲಾಬಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯದಿಂದ ಈ ಬಾರಿ 1 ಕೋಟಿ ಗುಲಾಬಿ ಹೂಗಳು ವಿದೇಶಗಳಿಗೆ ರಫ್ತಾಗಲಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ, ಸಿಂಗಾಪುರ, ಜಪಾನ್, ಮಲೇಶಿಯಾ, ರಷ್ಯಾ ಸೇರಿ ವಿವಿಧ ದೇಶಗಳಿಂದ ಗುಲಾಬಿಗೆ ಹೆಚ್ಚಿನ ಬೇಡಿಕೆ ಇದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೋಟಿಗೂ ಅಧಿಕ ಹೂವುಗಳು ರವಾನೆಯಾಗಲಿವೆ. ರಾಜ್ಯದಲ್ಲಿ ಈ ಬಾರಿ ಬರದ ನಡುವೆಯೂ ಹೂವಿನ ಇಳುವರಿಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ. ದೊಡ್ಡಬಳ್ಳಾಪುರ, ಆನೇಕಲ್, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ವಿವಿಧ ತಳಿಯ ಹೂವುಗಳು ಪೂರೈಕೆಯಾಗುತ್ತಿದ್ದು, ಪ್ರೇಮಿಗಳ ದಿನಕ್ಕೆ ಬೇಡಿಕೆಗೆ ಅನುಗುಣವಾಗಿ ಹೂವು ಲಭ್ಯವಾಗಲಿವೆ. ರಾಜ್ಯದ ವಿವಿಧ ಕಡೆ ಕೂಡ ಗುಲಾಬಿಗಳಿಗೆ ಭಾರೀ ಡಿಮ್ಯಾಂಡ್ ಇದೆ.
ಕೇಕ್, ಚಾಕೊಲೇಟ್ಗಳ ಆಕರ್ಷಣೆ!
ಪ್ರೇಮಿಗಳ ದಿನಕ್ಕೆ ನಗರದ ಹಲವು ಕೇಕ್ ಹಾಗೂ ಚಾಕೊಲೇಟ್ ಮಳಿಗೆಗಳು ಪ್ರೇಮಿಗಳ ದಿನಕ್ಕೆ ಹೃದಯದ ಆಕಾರದ ಕೇಕ್ ಹಾಗೂ ಚಾಕೊಲೇಟ್ಗಳ ತಯಾರಿಯಲ್ಲಿ ತೊಡಗಿಕೊಂಡಿವೆ. ಬಹಳಷ್ಟು ಮಂದಿ ಪ್ರೇಮ ನಿವೇದನೆಗಾಗಿ ಹೃದಯಾಕಾರದ ಕೇಕ್ಗಳಿಗೆ ಈಗಾಗಲೇ ಬುಕಿಂಗ್ ಮಾಡುತ್ತಿದ್ದಾರೆ. ನಗರದ ಮಾಲ್ ಗಳು ಹಾಗೂ ಕೆಲ ಹೋಟೆಲ್ಗಳೂ ಪ್ರೇಮಿಗಳ ದಿನಕ್ಕೆ ಸಭಾಂಗಣಗಳು ಸಿಂಗಾರಗೊಳ್ಳತೊಡಗಿವೆ. ನಮ್ಮಲ್ಲಿ ಕೆಂಪು, ಬಿಳಿ, ಹಳದಿ, ನಸುಗೆಂಪು ಸೇರಿ ವಿವಿಧ ಬಣ್ಣದ ಗುಲಾಬಿ ಲಭ್ಯವಿದ್ದು, ಫೆಬ್ರವರಿಯಲ್ಲಿ ಕೆಂಗುಲಾಬಿಗೆ ಬೇಡಿಕೆ ಹೆಚ್ಚು.
ಕಳೆದ ವರ್ಷ ಪ್ರೇಮಿಗಳ ದಿನದಂದು 7 ಲಕ್ಷಕ್ಕೂ ಅಧಿಕ ಕೆಂಗುಲಾಬಿ ಹೂವು ಮಾರಾಟವಾಗಿತ್ತು. ಈ ಬಾರಿ 8-9 ಲಕ್ಷ ಮಾರಾಟವಾಗುವ ನಿರೀಕ್ಷೆ ಇದೆ. ಸದ್ಯ ಒಂದು ಗುಲಾಬಿ ಹೂವು 10-15 ರೂ.ಗೆ ಮಾರಾಟವಾಗುತ್ತಿದ್ದು, ಪ್ರೇಮಿಗಳ ದಿನದಂದು 18-20 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಪ್ರೇಮಿಗಳ ದಿನವನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಏಳು ದಿನಗಳ ಕಾಲ ಆಚರಿಸಲಾಗುತ್ತದೆ. ಫೆ. 7ರಂದು ಗುಲಾಬಿ ದಿನದಿಂದ ಪ್ರಾರಂಭವಾಗಿ, ನಂತರ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಅಂತಿಮವಾಗಿ ಫೆ. 14ರಂದು ವ್ಯಾಲೆಂಟೈನ್ಸ್ ಡೇವರೆಗೂ ಈ ವ್ಯಾಲೆಂಟೈನ್ಸ್ ವೀಕ್ ಆಚರಿಸಲಾಗುತ್ತದೆ.