ಕರಾವಳಿಯಲ್ಲಿ ಕೋಳಿ ಅಂಕದ ದರ್ಬಾರ್!
– ಕೋಳಿ ಅಂಕದ ಜೂಜಾಟ ನಿಷೇಧ
– ತಮಿಳು ನಾಡಿನಿಂದ ಬರುತ್ತಿದೆ ಕೋಳಿ
NAMMUR EXPRESS NEWS
ರಾಜ್ಯದಲ್ಲಿ ಅವ್ಯಾಹತವಾಗಿ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ನಿಷೇಧ ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯಿದೆ- 1960 ಕಲಂ-11ರ ಪ್ರಕಾರ ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.
ನಿಷೇಧದ ಹಿಂದಿರುವ ಕಾರಣ ಏನು?
ರಾಜ್ಯದಲ್ಲಿ ನಾನಾ ಕಡೆ ಅದರಲ್ಲೂ ಕರಾವಳಿಭಾಗದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಆಯೋಜಿಸಿ ಪ್ರತಿನಿತ್ಯ ಕೋಟ್ಯಂತರ ರೂ. ಮೌಲ್ಯದ ಜೂಜಾಟ ನಡೆಯುತ್ತಿದೆ. ದಿನದ 24 ಗಂಟೆಯೂ ಎಡೆಬಿಡದೆ ಕೋಳಿ ಅಂಕ ನಡೆಯುತ್ತಿದ್ದು, ವಿದ್ಯಾರ್ಥಿಗಳು, ಯುವ ಸಮುದಾಯ ಈ ಜೂಜಿಗೆ ಬಲಿಯಾಗುತ್ತಿದ್ದಾರೆ. 100 ರೂ.ನಿಂದ ಆರಂಭವಾಗುವ ಈ ಜೂಜು 5 ಲಕ್ಷ ರೂ.ವರೆಗೂ ನಡೆಯುತ್ತಿದೆ. ಕರಾವಳಿ ಭಾಗದ ದೊಡ್ಡ ದೊಡ್ಡ ಜಾತ್ರೆಯಲ್ಲಿಒಂದೊಂದು ಕೋಳಿಗಳ ಮೇಲೆ 1ರಿಂದ 5 ಲಕ್ಷ ರೂ.ವರೆಗೂ ಜೂಜು ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ ಕೋಳಿ ಅಂಕದಿಂದ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾದರೆ, ಇವುಗಳಲ್ಲಿ ಶೇ.60ರಷ್ಟು ಕೋಳಿ ಬಲಿ ಕರಾವಳಿ ಭಾಗದಲ್ಲೇ ನಡೆಯುತ್ತಿದೆ.ಕರಾವಳಿ ಭಾಗದಲ್ಲಿ ಜಾತ್ರೆ, ರಥೋತ್ಸವದ ನೆಪದಲ್ಲಿ ಕೋಳಿ ಅಂಕ ನಡೆಯುತ್ತಿದೆ.