ರೈತ ಹುಡುಗನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ನೀಡಿ
– ರೈತರಿಂದ ಸಿಎಂಗೆ ಮನವಿ
– ಗ್ಯಾರಂಟಿ ಯೋಜನೆ ಬಗ್ಗೆ ರೈತ ಮುಖಂಡರ ಮೆಚ್ಚುಗೆ
NAMMUR EXPRESS NEWS
ಬೆಂಗಳೂರು: ಈ ಹಿಂದಿನಿಂದಲೂ ಹಲವು ಬಾರಿ ರೈತಾಪಿ ವರ್ಗದ ಯುವಕರನ್ನು ವರಿಸುವ ಯುವತಿಯರಿಗೆ ಪ್ರೋತ್ಸಾಹಧನ ಅಥವಾ ಇತರೆ ಯೋಜನೆ ಘೋಷಿಸಿ ಎಂದು ಅನೇಕ ರೈತ ಸಂಘಟನೆಗಳು ಆಗ್ರಹಿಸಿತ್ತು. ಇದೀಗ ಈ ವಿಷಯ ಮತ್ತೊಮ್ಮೆ ಪ್ರಸ್ತಾಪಗೊಂಡಿದ್ದು, ರಾಜ್ಯದ ರೈತ ಹುಡುಗನನ್ನು ಮದುವೆಯಾಗುವ ಯುವತಿಗೆ ಐದು ಲಕ್ಷ ರೂ. ಅನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕೋರಲಾಗಿದೆ. ವೃತ್ತಿಯಲ್ಲಿ ರೈತನಾದ ಹುಡುಗನನ್ನು ಮದುವೆಯಾಗುವ ಯುವತಿಗೆ ರಾಜ್ಯ ಸರ್ಕಾರದಿಂದ 5 ಲಕ್ಷರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘಟನೆಗಳ ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಇದೀಗ ರಾಜ್ಯ ಬಜೆಟ್ಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಈ ವಿಷಯವನ್ನು ಸಿಎಂ ಗಮನಕ್ಕೆ ತರುವಲ್ಲಿ ರೈತರು ಮುಂದಾಗಿದ್ದಾರೆ.
ರೈತ ಸಂಘಟನೆಗಳ ಸುಮಾರು 218 ಪ್ರತಿನಿಧಿಗಳು, ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಬಡಗಲಪುರ ನಾಗೇಂದ್ರ, ‘ಕೃಷಿ ಮಾಡುವವರ ಮಕ್ಕಳಿಗೆ ಇಂದು ಹೆಣ್ಣು ಕೊಡುತ್ತಿಲ್ಲ. 45 ವರ್ಷವಾದರೂ ವಿವಾಹವಾಗುತ್ತಿಲ್ಲ. ಇದರಿಂದಾಗಿ ಕೃಷಿಗೂ ಆದ್ಯತೆ ಸಿಗುತ್ತಿಲ್ಲ. ಹಾಗಾಗಿ, ರೈತನನ್ನು ವಿವಾಹವಾಗುವ ಹುಡುಗಿಗೆ ಪ್ರೋತ್ಸಾಹ ಧನ ನೀಡಬೇಕು’ ಎಂದು ಒತ್ತಿ ಹೇಳಿದರು.
ರೈತರ ಸಾಲ ಮನ್ನಕ್ಕೂ ಆಗ್ರಹಿಸಲಾಗಿದೆ. ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು, ರೈತಪರ ಬಜೆಟ್ ಮಂಡಿಸಬೇಕು ಎಂದು ಸಹ ಮನವಿ ಮಾಡಲಾಗಿದೆ ಎಂದು ರೈತ ಪ್ರತಿನಿಧಿಗಳು ಹೇಳಿದ್ದಾರೆ. ಇನ್ನು ಗ್ಯಾರಂಟಿ ಯೋಜನೆ ಬಗ್ಗೆ ರೈತ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.