ಮದ್ಯಪ್ರಿಯರೇ ಗಮನಿಸಿ..!
– ಫೆ. 14ರಿಂದ 17ರವರೆಗೆ ಮದ್ಯ ಮಾರಾಟ ನಿಷೇಧ
NAMMUR EXPRESS NEWS
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಸಂಜೆ 5 ಗಂಟೆಯಿಂದ ಫೆಬ್ರವರಿ 17ರಂದು ಬೆಳಗ್ಗೆ 6 ಗಂಟೆವರೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಪಾರದರ್ಶಕವಾಗಿ ಚುನಾವಣೆ ನಡೆಸಲು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತದಾನ ಅಂತ್ಯಗೊಳ್ಳುವ 48 ಗಂಟೆ ಪೂರ್ವದಲ್ಲಿ ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟ ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಸಿ ಮದ್ಯ ಸಾಗಣೆ, ಮಾರಾಟ ಅಥವಾ ದಾಸ್ತಾನು ಮಾಡಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮದ್ಯ ಮಾರಾಟ ನಿಷೇಧಿಸಿರುವುದಕ್ಕೆ ಬೆಂಗಳೂರಿನ ನಗರ ಜಿಲ್ಲಾ ವರ್ತಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಮದ್ಯ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 250 ಕೋಟಿ ರೂಪಾಯಿ ನಷ್ಟವಾಗುತ್ತದೆ. ಪ್ರೇಮಿಗಳ ದಿನದಂದು ಮದ್ಯ ಮಾರಾಟ ಹೆಚ್ಚಾಗಿರುತ್ತದೆ. ಕೇವಲ 16 ಸಾವಿರ ಮಂದಿ ಮಾತ್ರ ಮತ ಚಲಾವಣೆ ಮಾಡುತ್ತಾರೆ. ಅವರೆಲ್ಲರೂ ವಿದ್ಯಾವಂತರಾಗಿದ್ದು, ಚುನಾವಣಾ ಆಯೋಗ ಮದ್ಯ ಮಾರಾಟ ನಿಷೇಧವನ್ನು ಮರುಪರಿಶೀಲಿಸಬೇಕು ಎಂದು ಹೇಳಲಾಗಿದೆ.