- ಒಂದು ದಿನ ನ್ಯಾಯಾಂಗ ಬಂಧನ
- ಹಿಂಡಲಗ ಜೈಲಿಗೆ ರವಾನೆ
ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಬಂಧನಕ್ಕೆ ಒಳಗಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಪಂಚಾಕ್ಷರಿ ಈ ಆದೇಶ ಹೊರಡಿಸಿದ್ದು, ಕುಲಕರ್ಣಿ ಹಿಂಡಲಗಾ ಜೈಲು ಸೇರಿದ್ದಾರೆ.
ಧಾರವಾಡದ ಎರಡನೇ ಹೆಚ್ಚುವರಿ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಈ ಆದೇಶ ನೀಡಿದೆ. ಹೀಗಾಗಿ ಧಾರವಾಡದಿಂದ ಬೆಳಗಾವಿಗೆ ಹಿಂಡಲಗಾ ಜೈಲಿಗೆ ಸಿಬಿಐ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ, ಸಹೋದರ ವಿಜಯ ಕುಲಕರ್ಣಿ ಸೇರಿದಂತೆ ಮಾಜಿ ಸಚಿವರ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ದಾಳಿ ನಡೆಸಿ, ಮೂವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದಾರೆ.
ಧಾರವಾಡದ ಕಲ್ಯಾಣನಗರದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ, ಉಪನಗರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿತು. ಏತನ್ಮಧ್ಯೆ, ಸಚಿವರ ಸಹೋದರ ಹುಬ್ಬಳ್ಳಿಯ ಪ್ರಗತಿ ಕಾಲನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಅವರನ್ನೂ ವಿಚಾರಣೆಗೆ ಕರೆದ್ಯೊಯ್ದಿದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ, ಉಪನಗರ ಠಾಣೆ ಎದುರು ಹೈಡ್ರಾಮಾವೇ ನಡೆಯಿತು. ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ವಿನಯ ಆಪ್ತನ ಬಂಧನ
ಇಷ್ಟೆಲ್ಲ ಪ್ರಹಸನಗಳ ಮಧ್ಯೆಯೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಶ್ರೀಷ್ ಪಾಟೀಲ್ನನ್ನು ಆತನ ಮಾಳಮಡ್ಡಿಯ ನಿವಾಸದಿಂದ ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದರು.
ಏನಿದು ಘಟನೆ..?:2016 ಜೂನ್ 15ರಂದು ತನ್ನದೇ ಮಾಲೀಕ್ವತದ ಉದಯ್ ಜಿಮ್ನಲ್ಲಿ ಜಿಪಂ ಅಧ್ಯಕ್ಷ ಯೋಗೇಶಗೌಡ ಗೌಡರ್ನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 8 ಜನರ ವಿರುದ್ಧ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಈ ಪೈಕಿ ಮಾಜಿ ಸಚಿವ ವಿನಯ ಕುಲಕರ್ಣಿ ಒಂದನೇ ಆರೋಪಿಯಾಗಿದ್ದರೇ, ಕ್ರಮವಾಗಿ ಬಸವರಾಜ ಮುತಗಿ, ವಿಕಾಸ ಕಲಬುರ್ಗಿ, ಈರಣ್ಣ ಮಳಿವಾಡ, ಬಸಯ್ಯ ಹಿರೇಮಠ, ಬಾಬು ಕಟಗಿ, ಅಮಿತ ದೊಡ್ಡಮನಿ ಹಾಗೂ ಯೋಗೇಂದ್ರ ಬಾಬು ಉರ್ಫ್ ಬಾಬು ವಿಕೆ ಆರೋಪಿಗಳಾಗಿದ್ದರು.
ಸಾಕ್ಷ್ಯ ನಾಶ ಆರೋಪ
ಸಾಕ್ಷ್ಯ ನಾಶಪಡಿಸುವ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ, ವಿಚಾರಣೆ ಈವರೆಗೂ ಅಂತ್ಯವಾಗದೇ ಇರುವ ಹಿನ್ನೆಲೆಯಲ್ಲಿ ಗುರುವಾರ ಸಿಬಿಐ ಅಧಿಕಾರಿಗಳು ಮತ್ತೇ ಅವರನ್ನು ವಿಚಾರಣೆಗೊಳಪಡಿಸಿದ್ದರು.
ಇನ್ಸಪೆಕ್ಟರ್ಗಾಗಿ ಹುಡುಕಾಟ!:
ಯೋಗೇಶಗೌಡ ಹತ್ಯೆ ನಡೆದ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರಿಕರ್ ಸದ್ಯ ಹುಬ್ಬಳ್ಳಿಯ ಸಿಸಿಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯಕೀಯ ರಜೆಯ ಮೇಲೆ ತೆರಳಿರುವ ಚನ್ನಕೇಶಗಾಗಿ ಸಿಬಿಐ ಅಧಿಕಾರಿಗಳು ಬೆಳಗ್ಗೆಯಿಂದಲೇ ಹುಡುಕಾಟ ನಡೆಸಿದ್ದಾರೆ.
ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, ಈ ಹಿಂದೆ ಬಿಜೆಪಿಯವರು ಸಿಬಿಐ ಕಾಂಗ್ರೆಸ್ ಕೈಗೊಂಬೆ ಅಂತಿದ್ರು, ಈಗ ಕಾಂಗ್ರೆಸ್ನವರು ಸಿಬಿಐ ಬಿಜೆಪಿ ಕೈಗೊಂಬೆ ಅನ್ನುತ್ತಿದ್ದಾರೆ.
ಇದು ರಾಜಕೀಯ ಪ್ರೇರಿತವಾಗಬಾರದು. ಕಾನೂನು ಎಲ್ಲರಿಗೂ ಒಂದೇ. ಇದರಲ್ಲಿ ರಾಜಕೀಯ ಮಾಡಬಾರದು. ಸಿಬಿಐ ಆಗಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ. ಇಂತಹ ಸಂಸ್ಥೆಗಳನ್ನು ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದಾಗ ದುರುಪಯೋಗಪಡಿಸಿಕೊಳ್ಳಬಾರದು. ವಿನಯ ಕುಲಕರ್ಣಿ ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೇ ಕಾರಣಕ್ಕೆ ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತೀವೆ ಎಂದೂ ಹೊರಟ್ಟಿ ಆರೋಪಿಸಿದರು.
ಬಿಜೆಪಿ ಹೈಕಮಾಂಡ್ ಭೇಟಿಗೆ ವಿನಯ ಕುಲಕರ್ಣಿ ಹೋಗಿದ್ದು ನಿಜ. ಆದರೆ ಯಾರು ಯಾರನ್ನು ಕರೆದಿದ್ದರು ಎಂಬುದು ಗೊತ್ತಿಲ್ಲ. ಈ ದಾಳಿ ರಾಜಕೀಯ ಒತ್ತಡದಿಂದಲೇ ಆಗಿದೆ ಎಂದೂ ಅವರು ದೂರಿದರು.
ವಿನಯ ಹಾಗೂ ವಿಜಯ ಕುಲಕರ್ಣಿಯವರನ್ನು ವಶಕ್ಕೆ ನೀಡಿಸುವಂತೆ ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.