– ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ!
– ಡಾಮರು ಸಾಗಾಟದ ಲಾರಿಯಲ್ಲಿ ಬೆಂಕಿ!
– ಅಕ್ರಮ ಮರಳು ಸಾಗಾಟ ಲಾರಿ ವಶ!
NAMMUR EXPRESS NEWS
ಬಂಟ್ವಾಳ: ಚಲಿಸುತ್ತಿದ್ದ ರೈಲಿನಿಂದಲೇ ನೇತ್ರಾವತಿ ನದಿಗೆ ಹಾರಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 6.20 ಕ್ಕೆ ನಡೆದಿದೆ. ತುಮಕೂರು ಮೂಲದ ನಯನ್ ಎಂ.ಜಿ.(27) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು ಎಂದು ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರ ಬ್ಯಾಗ್ ನಲ್ಲಿ ದೊರೆತಿರುವ ಆಧಾರ್ ಕಾರ್ಡ್ ನಲ್ಲಿದ್ದ ಹೆಸರಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿರುವ ಯುವತಿಯು ಬಿ.ಸಿ.ರೋಡ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ರೈಲು ಬರುತ್ತಿದ್ದಂತೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕುಳಿತಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿ ಬಿ.ಸಿ.ರೋಡಿನ ಕಚೇರಿಗೆ ನೀಡಿ ವಿಚಾರ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಹಾಗೂ ಆಕೆಯ ವಿಳಾಸ ವಿವರ ಇನ್ನಷ್ಟೇ ತಿಳಿಯಬೇಕಿದೆ. ನದಿಯಲ್ಲಿ ತೇಲಾಡುತ್ತಿದ್ದ ಮೃತದೇಹವನ್ನು ಸ್ಥಳೀಯ ಮುಳುಗು ತಜ್ಞರಾದ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಡಾಮರು ಸಾಗಾಟದ ಲಾರಿಯಲ್ಲಿ ಬೆಂಕಿ
ಉಪ್ಪಿನಂಗಡಿ: ದಿಢೀರ್ ಬೆಂಕಿ ಕಾಣಿಸಿಕೊಂಡ ಕಾರಣ ಡಾಮರು ಸಾಗಿಸುತ್ತಿದ್ದ ಲಾರಿ ಭಾಗಶಃ ಸುಟ್ಟು ಹೋದ ಘಟನೆ ಫೆ.13ರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಲಾರಿಯು ಉದನೆ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಅಪಾಯದ ಅರಿವಾಗುತ್ತಿದಂತೆ ಚಾಲಕ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಪಾರಾಗಿದ್ದಾರೆ. ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯ ಕಾರ್ಮಿಕರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.
ಪೆರಿಯಡ್ಕ ನೆಡುತೋಪಿಗೆ ಬೆಂಕಿ ಉಪ್ಪಿನಂಗಡಿ ಇಲ್ಲಿನ ಪೆರಿಯಡ್ಕ ಸಮೀಪದ ಸರ್ವೋದಯ ಪ್ರೌಢಶಾಲೆಗೆ ಹೋಗುವ ದಾರಿ ಬಳಿಯ ಅರಣ್ಯ ಇಲಾಖೆಯ ನೆಡುತೋಪಿ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಫೆ.14ರಂದು ಸಂಜೆ ಸುಮಾರು 6.30ರ ಸುಮಾರಿಗೆ ಅಕೇಶಿಯಾ ನೆಡುತೋಪು ಇರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಅಕ್ರಮ ಮರಳು ಸಾಗಾಟ ಲಾರಿ ವಶ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸರು ಫೆ. 13ರಂದು ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮ ಮರಳು ಸಾಗಾಟ ಕಂಡುಬಂದಿದ್ದು, ಲಾರಿ ಸಹಿತ ಮರಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಸಿಬಂದಿ ಗಸ್ತು ತಿರುಗುತ್ತಿದ್ದಾಗ ಪೊಳಲಿ ಕಡೆಯಿಂದ ಟಿಪ್ಪರ್ ಲಾರಿ ಆಗಮಿಸಿದ್ದು, ತಡೆದು ವಿಚಾರಿಸಿದಾಗ ಪರವಾನಿಗೆ ರಹಿತ ಮರಳು ಸಾಗಾಟ ಬೆಳಕಿಗೆ ಬಂದಿದೆ. ಅಡೂXರು ಹೊಳೆಯಿಂದ ಮರಳು ತುಂಬಿಸಿ ಬಂದಿರುವುದಾಗಿ ಚಾಲಕ ಮೋಹನ್ ಕೆ. ತಿಳಿಸಿದ್ದಾನೆ. ಪೊಲೀಸರು 5 ಲಕ್ಷ ರೂ. ಮೌಲ್ಯದ ಲಾರಿ ಹಾಗೂ 5 ಸಾವಿರ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ.