ಪರೀಕ್ಷೆ ಕೊಠಡಿಯಿಂದ ಹೊರಗೆ ಕಳಿಸಿದ್ದಕ್ಕೆಆತ್ಮಹತ್ಯೆ!
– ಆರನೇ ಮಹಡಿಯಿಂದ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಯುವಕ: ಮಣಿಪಾಲಲ್ಲಿ ನಡೆದ ಘಟನೆ
– ಕಡಲ ತೀರದಲ್ಲಿ ಮತ್ತೊಂದು ಮೃತ ದೇಹ ಪತ್ತೆ
NAMMUR EXPRESS NEWS
ಉಡುಪಿ : ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸಿದ ಕಾರಣಕ್ಕೆ ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿಯೋರ್ವ ಆರನೇ ಮಹಡಿಯಲ್ಲಿರುವ ತರಗತಿ ಕೊಠಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಣಿಪಾಲದ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ಬಿಹಾರ ಮೂಲದ ವಿದ್ಯಾರ್ಥಿ ಸತ್ಯಂ ಸುಮನ್(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸತ್ಯಂ ಸುಮನ್ ಮಾಹೆಯ ಎಂಸಿಎಚ್ ಪಿ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿದ್ದರು. ಮಧ್ಯಾಹ್ನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದನ್ನು ಪರೀಕ್ಷಾ ಮೇಲ್ವಿಚಾರಕರು ಗಮನಿಸಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ. ಇದರಿಂದಮನನೊಂದ ವಿದ್ಯಾರ್ಥಿ 6ನೇ ಮಹಡಿಯಲ್ಲಿರುವ ತರಗತಿ ಕೊಠಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಲ ತೀರದಲ್ಲಿ ಮೃತ ದೇಹ ಪತ್ತೆ
ಕುಂದಾಪುರ: ಕೋಡಿ ಕಡಲ ತೀರದಲ್ಲಿ ವ್ಯಕ್ತಿಯೊಬ್ಬನ ಮೃತ ದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ ಸ್ಥಳೀಯರು ಸಮುದ್ರ ತೀರಕ್ಕೆ ಬಂದಾಗ ಶವ ಪತ್ತೆಯಾಗಿದ್ದು, ಪ್ಯಾಂಟ್, ಬೆಲ್ಟ್ ಚಪ್ಪಲ್, ಆಧಾರ್ ಕಾರ್ಡ್, ಕಾಲೇಜು ಐಡೆಂಟಿಟಿ ಕಾರ್ಡ್, ಬಸ್ ಟಿಕೆಟ್ ಮೊದಲಾದ ದಾಖಲೆಗಳು ದೊರಕಿವೆ. ಪ್ಯಾಂಟ್ ಜೇಬಿನಲ್ಲಿ ದಾಖಲೆಗಳು ದೊರಕಿವೆ. ಶರ್ಟ್ ಪತ್ತೆಯಾಗಿಲ್ಲ. ಹೊಟ್ಟೆಯಲ್ಲಿ ನೀರು ತುಂಬಿರದ ಕಾರಣ ನೀರಿಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ 1.42ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಸರ್ಕಾರೀ ಬಸ್ಸಿನಲ್ಲಿ ಪ್ರಯಾಣಿಸಿದ ಟಿಕೆಟ್ ಪತ್ತೆಯಾಗಿದೆ. ಸ್ಥಳದಲ್ಲಿ ದೊರಕಿದ ದಾಖಲೆಗಳು ಮೃತ ವ್ಯಕ್ತಿಯದ್ದೇ ಅಲ್ಲವೇ ಎಂಬುದನ್ನು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.