ಮೋಸ್ಟ್ ವಾಂಟೆಡ್ ನಕ್ಸಲರಿಬ್ಬರು ಅರೆಸ್ಟ್!
– ಮೂಡಿಗೆರೆಯ ನಕ್ಸಲ್ ಅಂಗಡಿ ಸುರೇಶ್ ಬಂಧನ
– ಶೃಂಗೇರಿ ಮೂಲದ ನಕ್ಸಲ್ ಶ್ರೀಮತಿಗೆ ನ್ಯಾಯಾಂಗ ಬಂಧನ
– ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್ಸ್ಟೇಬಲ್
NAMMUR EXPRESS NEWS
ಮೂಡಿಗೆರೆ: ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ಎಂಬಾತನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನಕ್ಸಲ್ ಸುರೇಶ್ ಗೆ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ತಿಳಿದು ದಾಳಿ ನಡೆಸಿದ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್, ಕಳೆದ 10 ವರ್ಷಗಳಿಂದ ನಕ್ಸಲ್ ಆಗಿದ್ದಾನೆ. ಸುರೇಶ್ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆಯನ್ನು ಕೂಡ ಪೊಲೀಸ್ ಇಲಾಖೆ ಮಾಡಿತ್ತು. ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೇಸ್ ದಾಖಲಾಗಿದ್ದು, 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಸುರೇಶ್ ಪೊಲೀಸರಿಗೆ ಬೇಕಾಗಿರುವ ಆರೋಪಿ. ಸದ್ಯ ಕೇರಳ ಪೊಲೀಸರ ವಶದಲ್ಲಿರುವ ಸುರೇಶ್ ನನ್ನು ಚಿಕ್ಕಮಗಳೂರಿಗೆ ಕರೆತರಲಿದ್ದಾರೆ.
ಶೃಂಗೇರಿ ಮೂಲದ ನಕ್ಸಲ್ ಶ್ರೀಮತಿಗೆ ನ್ಯಾಯಾಂಗ ಬಂಧನ
ಕೇರಳದಲ್ಲಿ ಬಂಧನವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನಕ್ಸಲ್ ಶ್ರೀಮತಿಯನ್ನು ಕಾರ್ಕಳ ಪೊಲೀಸರ ವಶಕ್ಕೆ ಪಡೆದಿದ್ದಾರೆ. 9ಕ್ಕೂ ಹೆಚ್ಚು ಪ್ರಕರಣಗಳಿದ್ದ ಶ್ರೀಮತಿಗೆ 14 ದಿನ ನ್ಯಾಯಾಂಗ ಬಂಧನವನ್ನು ಎನ್.ಆರ್.ಪುರ ನ್ಯಾಯಾಲಯ ವಿಧಿಸಿದೆ. ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿಧ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿದ್ದು, ಸುಲಿಗೆ ಹಾಗೂ ಪೊಲೀಸರಿಗೆ ಸಪೋರ್ಟ್ ಮಾಡದಂತೆ ಬೆದರಿಸಿದ್ದು ಸೇರಿ ವಿವಿಧ ಪ್ರಕರಣಗಳ ಅಡಿಯಲ್ಲಿ ಕೇರಳದಲ್ಲಿ ನಕ್ಸಲ್ ಶ್ರೀಮತಿ ಬಂಧನವಾಗಿದ್ದರು.ಈ ಹಿನ್ನೆಲೆಯಲ್ಲಿ ಕಾರ್ಕಳ ಪೊಲೀಸರು ಶ್ರೀಮತಿಯನ್ನು ಕೇರಳದಲ್ಲಿ ಬಂಧಿಸಿದ್ದರು. ಬಳಿಕ ಶ್ರೀಮತಿಯನ್ನು ಶೃಂಗೇರಿ ಪೊಲೀಸರು ಕರೆತಂದು ಎನ್.ಆರ್.ಪುರ ಕೋರ್ಟ್ ಗೆ ಹಾಜರು ಪಡಿಸಿದ್ದರು. ವಿವಿಧ ಪ್ರಕರಣಗಳ ಅಡಿಯಲ್ಲಿ ನ್ಯಾಯಾಲಯವು ನಕ್ಸಲ್ ಶ್ರೀಮತಿಗೆ 14 ದಿನದ ನ್ಯಾಯಾಂಗ ಬಂಧನ ವಿಧಿಸಿದೆ.
ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್ಸ್ಟೇಬಲ್
ರಾಮನಗರ : ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದ್ಯಾವಸಂದ್ರ ಗ್ರಾಮದಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೆಂಗಳೂರು ನಗರ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ಸ್ಟೇಬಲ್ ಮಂಜುಶ್ರೀ (27) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಮಂಜುಶ್ರೀ ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ. ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.