ಕರಾವಳಿಯಿಂದ ಕಾಂಗ್ರೆಸ್ ಸಂಘಟನೆ ರಣ ಕಹಳೆ!
– 28 ಸ್ಥಾನಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ
– ಲೋಕ ಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ
– ಕರಾವಳಿ 2 ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಇನ್ನು ನಿಗೂಢ!
NAMMUR EXPRESS NEWS
ಮಂಗಳೂರು: ಮೂರು ದಶಕಗಳಿಂದ ಒಮ್ಮೆಯೂ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮುಖ ನೋಡದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿರುವ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಕಾಂಗ್ರೆಸ್, ಪಕ್ಷವು ಅಷ್ಟೊಂದು ಬಲ ಇಲ್ಲದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮತದಾರರ ಆಶೀರ್ವಾದ ಪಡೆಯಲು ಶತಾಯ ಗತಾಯ ಪ್ರಯತ್ನ ಮಾಡುವ ಸುಳಿವನ್ನು ನೀಡಿದೆ. ಅಲ್ಲದೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಿದೆ.
ಮಂಗಳೂರು ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಸ್ಪೃಶ್ಯರ, ಶೋಷಿತರ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಇಲ್ಲಿನ ಕುದ್ಮುಲ್ ರಂಗರಾಯರ ಕೊಡುಗೆಗಳನ್ನೇ ಜನರು ಮರೆತಿರುವ ವಿಚಾರವನ್ನು ಮುಂದಿಟ್ಟುಕೊಂಡು ‘ಉಪಕಾರ ಸ್ಮರಣೆ’ಯ ಪಾಠ ಮಾಡಿದರು. ಭೂ ಸುಧಾರಣೆ ಕಾಯ್ದೆಯಿಂದ ಭೂಮಾಲೀಕರಾದವರು ಪಕ್ಷದ ಋಣದಲ್ಲಿದ್ದಾರೆ ಎಂದು ನೆನಪಿಸಿದರು. ಪಕ್ಷವು ನಾಡಿನ ಹಾಗೂ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಎಳೆ ಎಳೆಯಾಗಿ ವಿವರಿಸುವ ಮೂಲಕ, ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದಾಗ ಆಗಿರುವ ನವಮಂಗಳೂರು ಬಂದರು, ಸುರತ್ಕಲ್ನ ಎನ್ಐಟಿಕೆ, ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ಕರಾವಳಿಯುದ್ದಕ್ಕೂ ಇರುವ ಸೇತುವೆಗಳೆಲ್ಲವೂ ಕಾಂಗ್ರೆಸ್ ಕೊಡುಗೆಗಳು ಎಂದು ಒತ್ತಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರ ಜೈಕಾರ– ಕೇಕೆಯ ಸದ್ದು ಮುಗಿಲುಮುಟ್ಟಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರ ಉತ್ಸಾಹವನ್ನು ಕಂಡು ಪುಳಕಿತರಾದ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಲೋಕಸಭಾ ಚುನಾವಣೆಗೆ ಮುನ್ನ ಪಕ್ಷವು ರಾಜ್ಯದಲ್ಲಿ ಏರ್ಪಡಿಸಿರುವ ಮೊದಲ ಸಮಾವೇಶವಿದು. ಕರಾವಳಿಯ ಜನರು ರಾಜಕೀಯವಾಗಿಯೂ ಬುದ್ದಿವಂತರು. ದೇಶದ ರಾಜಕಾರಣವನ್ನು ಅರ್ಥಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದೇವೆ’ ಎಂದರು. ವಿಧಾನಸಭೆಯಲ್ಲಿ ಕಳೆದುಕೊಂಡಿದ್ದನ್ನು ಲೋಕಸಭಾ ಚುನಾವಣೆಯಲ್ಲಿ ಪಡೆಯಲು ಕಾರ್ಯಕರ್ತರನ್ನು ಬಡಿದೆಬ್ಬಿಸುವ ಪ್ರಯತ್ನವನ್ನು ಅವರು ಮಾಡಿದರು.
ಕರಾವಳಿಯಲ್ಲಿ ಎರಡು ಗೆಲುವು
ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಜಯಭೇರಿ ಬಾರಿಸಿರುವ ಕಾಂಗ್ರೆಸ್, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ ಎರಡರಲ್ಲಿ ಮಾತ್ರ ಗೆದ್ದಿದೆ. ಈ ಸೋಲಿನಿಂದ ಕುಗ್ಗಿಹೋಗಿರುವ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಸೋಲಿನಿಂದ ಧೃತಿಗೆಡದೇ ಪ್ರಯತ್ನಪಟ್ಟರೆ ಕರಾವಳಿ ಜಿಲ್ಲೆಗಳಲ್ಲೂ ಪಕ್ಷಕ್ಕೆ ಗೆಲುವು ಕಷ್ಟವಲ್ಲ ಎಂದರು.
ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರು?
ಮುಂದಿನ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಸುಳಿವನ್ನು ಎಲ್ಲೂ ಬಿಟ್ಟುಕೊಡಲಿಲ್ಲ