- ರಾಜ್ಯದೆಲ್ಲೆಡೆ ಪ್ರತಿಭಟನೆ ಸಜ್ಜು
- ಈಡಿಗ ಬಿಜೆಪಿ ನಾಯಕರಿಂದ ಸಿಎಂ ಭೇಟಿ
- ಈಡಿಗ ಸಮುದಾಯ ಸಭೆ
ಬೆಂಗಳೂರು/ಶಿವಮೊಗ್ಗ: ದೇಶದ ಪ್ರತಿಷ್ಠಿತ ದೇವಾಲಯದಲ್ಲಿ ಒಂದಾದ ಸಿಗಂದೂರು ವಿಚಾರದಲ್ಲಿ ಸರಕಾರದ ನಡೆ ವಿರೋಧಿಸಿ ರಾಜ್ಯದೆಲ್ಲೆಡೆ ಇದೀಗ ಭಾರಿ ಹೋರಾಟಕ್ಕೆ ಸಿದ್ಧತೆ ನಡೆದಿದೆ.
ಸಿಗಂದೂರು ಗೊಂದಲಗಳ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜತೆ ಜನಾಂಗದ ಪ್ರಮುಖರ ಸಭೆ ನಡೆಯಿತು.ಯಡಿಯೂರಪ್ಪ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಮುದಾಯದ ಶ್ರೀಗಳಾದ ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿ ಮಾಡಿ ಚರ್ಚೆ ನಡೆಸಲಾಯಿತು. ಬಳಿಕ ಸಂಸದ ರಾಘವೇಂದ್ರ ಅವರನ್ನು ಭೇಟಿಯಾಗಿ ಸಭೆ ನಿಗದಿ ಕುರಿತು ಚರ್ಚೆ ನಡೆಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್ ಹಾಜರಿದ್ದರು. ಇತ್ತ ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ನಾಯಕ ಬಿ.ಕೆ.ಹರಿಪ್ರಸಾದ್ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ಸರಿಯಲ್ಲ. ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಹಿಂದುಳಿದ ವರ್ಗಗಳ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದೆ. ಇದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ. ನನಗೆ ಯಾವುದೇ ಜಾತಿಯ ಬೇಧಭಾವ ಇಲ್ಲ. ಎಲ್ಲಿ ಶೋಷಣೆ ಆದರೂ ನೊಂದವರ ಪರ ನಿಲ್ಲುತ್ತೇನೆ.
ಸಿಗಂದೂರು ಚೌಡಮ್ಮ ದೇವಿ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳಿಗೆ ಸ್ಪಷ್ಟ ವಿರೋಧ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಸಮುದಾಯದ ಪರ ಯಾವುದೇ ಹೋರಾಟದಲ್ಲಿ ನಾನಿರುತ್ತೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಕೆ.ವೈ. ರಾಮಚಂದ್ರ, ಪ್ರೊ.ಕಲ್ಲನ, ತೇಕಲೆ ರಾಜಪ್ಪ, ವೀಣಾ ವೆಂಕಟೇಶ್, ಲಲಿತಾ ಹೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.