ತಹಸೀಲ್ದಾರ್ ಅಂದ್ರೆ ಕಾರ್ಕಳ ತಹಸೀಲ್ದಾರ್ ಕಣಪ್ಪ!
– 4 ಗಂಟೆಯಲ್ಲಿ ವೃದ್ದೆಗೆ ಸ್ಥಳದಲ್ಲೇ ವೃದ್ಧಾಪ್ಯ ವೇತನ ರಿಲೀಸ್
– ಇಡೀ ಆಡಳಿತ ಒಟ್ಟಾಗಿ ಸೇವೆಗೆ ನಿಂತಿತು..ರಾಜ್ಯಕ್ಕೆ ಮಾದರಿ ಆಯಿತು..!
NAMMUR EXPRESS NEWS
ಕಾರ್ಕಳ: ನಾಲ್ಕು ಗಂಟೆಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನವನ್ನು ಮಂಜೂರು ಗೊಳಿಸಿದ ಕಾರ್ಕಳ ತಹಶಿಲ್ದಾರ್ ಅವರ ಕೆಲಸ ಈಗ ರಾಜ್ಯದ ಗಮನ ಸೆಳೆದಿದೆ. ಹೌದು. ಸರಕಾರದ ಸವಲತ್ತುಗಳನ್ನು ಪಡೆಯಲು ಸರಕಾರದ ಕಛೇರಿಗಳಿಗೆ ಪಲಾನುಭವಿಗಳು ಅಲೆಯಬೇಕಾದ ಸ್ಥಿತಿ ಇನ್ನು ಇದೆ. ಆದರೆ ಉಡುಪಿ ಜಿಲ್ಲೆ ಕಾರ್ಕಳ ತಹಸೀಲ್ದಾರ್ ಇದೀಗ ರಾಜ್ಯಕ್ಕೆ ಮಾದರಿ ಹೆಜ್ಜೆಯನ್ನು ಇಟ್ಟಿದ್ದಾರೆ.
ಏನಿದು ಕೇಸ್?
ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಮಾಡಲು ಬಂದ ವೃದ್ದೆಯೋರ್ವರ ಸಮಸ್ಯೆಯನ್ನು ಆಲಿಸಿ ವೃದ್ದಾಪ್ಯ ವೇತನವನ್ನು ಕೇವಲ ನಾಲ್ಕು ಘಂಟೆಗಳಲ್ಲಿ ಕಲ್ಪಿಸಿ ಕೊಟ್ಟಿದ್ದಾರೆ ಕಾರ್ಕಳ ತಹಶಿಲ್ದಾರ್ ನರಸಪ್ಪ. ತಮ್ಮ ಕಛೇರಿಗೆ ಆಗಮಿಸುವ ವೇಳೆ ವೃದ್ದೆ ಶೀಲಾರವರ ಸಮಸ್ಯೆ ಆಲಿಸಿದರು. ಶೀಲ ಮಲೆಕುಡಿಯ 70 ವರ್ಷ ಪ್ರಾಯದ ವೃದ್ದೆ. ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತಿದ್ದಾರೆ. ಒಬ್ಬಂಟಿಯಾಗಿದ್ದು ಸರಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರೂ ಗೃಹಲಕ್ಷ್ಮಿ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ. ಇದನ್ನರಿತ ತಹಶಿಲ್ದಾರ್ ನರಸಪ್ಪ ತಕ್ಷಣಕ್ಕೆ ಅಜೆಕಾರಿನ ನಾಡ ಕಛೇರಿ ಉಪತಹಶಿಲ್ದಾರ್ ವೃದ್ದಾಪ್ಯ ವೇತನವನ್ನು ಮಂಜೂರು ಮಾಡಬೇಕೆಂದು ಅಜೆಕಾರು ಉಪತಹಶಿಲ್ದಾರ್ ಆದೇಶ ಹೊರಡಿಸಿದರು.
ಇಡೀ ಆಡಳಿತ ಒಟ್ಟಾಗಿ ಸೇವೆಗೆ ನಿಂತಿತು..!
ಅಜೆಕಾರು ನಾಡ ಕಚೇರಿಯ ಉಪ ತಹಶಿಲ್ದಾರ್ ನಮಿತಾ ಬಿ ಅರ್ಜಿಯನ್ನು ಸಲ್ಲಿಸಿ ಅವರ ನೇತೃತ್ವದಲ್ಲಿ ಶಿರ್ಲಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿ ಶೀಲಾವರ ಖಾತೆ ತೆರೆಸಿ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಅನುಷಾ ಅವರಿಂದ ವಯಸ್ಸಿನ ದೃಢಪ್ರತಿ ಪಡೆದು ಕೆರುವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್ ಕಂದಾಯ ನಿರೀಕ್ಷ ಮೊಹಮ್ಮದ್ ರಿಯಾಜ್ ಸಂಬಂಧಿತ ಎಲ್ಲಾ ವರದಿಗಳನ್ನು ತರಿಸಿ ಉಪ ತಹಶಿಲ್ದಾರ್ ತಾಲೂಕು ತಹಶಿಲ್ದಾರ್ ಗೆ ಹಸ್ತಾಂತರಿಸಿದರು. ಕಾರ್ಕಳ ತಹಶಿಲ್ದಾರ್ ನರಸಪ್ಪ ಅವರು ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರು ಗೊಳಿಸಿ ಮಂಜುರಾತಿ ಪತ್ರವನ್ನು ಶೀಲರವರಿಗೆ ಹಸ್ತಾಂತರಿಸಿದರು. ಶೀಲಾರವರ ಸುಮಾರು 22 ವರ್ಷಗಳಿಂದ ಖಾತೆ ಬದಲಾವಣೆಯಾಗಿರದ ಪಹಣಿಯನ್ನು ಬದಲಾಯಿಸುವ ಬಗ್ಗೆ ಭರವಸೆ ನೀಡಿ,ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ತಹಸೀಲ್ದಾರ್!
ತಹಸೀಲ್ದಾರ್ ನರಸಪ್ಪ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಲಗುಂದ ಗ್ರಾಮದವರು. ಕಾರ್ಕಳ ತಹಶಿಲ್ದಾರ್ ಆಗಿರುವ 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆ.ಎ.ಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಕಾರ್ಕಳ ತಹಶಿಲ್ದಾರ್ ಆಗಿ ನಿಯೋಜನೆ ಗೊಂಡವರು. ಸೇವೆ ಒದಗಿಸುವಲ್ಲಿ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಾದ ಗಾಯತ್ರಿ ಶೆಣೈ, ಮುಖ್ಯ ಪ್ರಬಂಧಕ ಉದಯ ಶಂಕರ್, ಅಜೆಕಾರು ನೆಮ್ಮದಿ ಕೇಂದ್ರದ ಸುರೇಂದ್ರ ನಾಯ್ಕ್ , ಭೋಜೆಗೌಡ ಸಹಕಾರ ನೀಡಿದ್ದಾರೆ.
ಎಲ್ಲಾ ಸೇವೆ ಜನರಿಗೆ ತಲುಪಿಸೋಣ..!
ಸರಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಸರಕಾರದ ನೀಡುವ ಎಲ್ಲಾ ಸೇವೆಗಳನ್ನು ಫಲಾನುಭವಿಗಳು ಸದುಪಯೋಗಪಡೆದುಕೊಳ್ಳಬೇಕು ಎನ್ನುತ್ತಾರೆ ತಹಸೀಲ್ದಾರ್ ನರಸಪ್ಪ.
ಸಂತಸ ತಂದಿದೆ: ವೃದ್ದಾಪ್ಯ ವೇತನ ಯೋಜನೆ ನನಗೆ ನೀಡಿರುವುದು ಖುಷಿ ತಂದಿದೆ. ಬದುಕಿಗೆ ಭದ್ರತೆ ನೀಡುತ್ತದೆ ಎಂದು ವೃದ್ಧಾಪ್ಯ ವೇತನ ಪಡೆದ ಫಲಾನುಭವಿ ಶೀಲಾ ಸಂತಸ ವ್ಯಕ್ತಪಡಿಸಿದ್ದಾರೆ.